ಉಚಿತವಾಗಿ ಪೇಪರ್ ವಿತರಿಸ್ತಾರೆ, ಸ್ವಂತ ಹಣದಲ್ಲೇ ಬಡವರಿಗೆ ಚಿಕಿತ್ಸೆ ಕೊಡಿಸ್ತಾರೆ:ಇವರೇ ನಮ್ಮ ಕುಂದಾಪ್ರದ ಪೇಪರ್ ಆಚಾರ್ಯ:

ಸೆಲೆಬ್ರಿಟಿಗಳು ನಮ್ಮ ನಡುವೆಯೇ ಇರುತ್ತಾರೆ. ಆದರೆ ನಮಗೇ ಗೊತ್ತಿಲ್ಲದೇ ಸಮಾಜಕ್ಕೆ ಧ್ವನಿಯಾಗುತ್ತೇ ಇರುತ್ತಾರೆ. ಅಂತಹ ಸೆಲಿಬ್ರಿಟಿಯೊಬ್ಬರು ಇಲ್ಲಿದ್ದಾರೆ ನೋಡಿ. ಕುಂದಾಪುರದಲ್ಲಿ ಗಂಗೊಳ್ಳಿ ಶಂಕರ್ ಆಚಾರ್ಯರ ಹೆಸರು ಚಿರಪರಿಚಿತ. ಕುಂದಾಪುರದ ಜನರೆಲ್ಲಾ ಇವರನ್ನು ಪೇಪರ್ ಆಚಾರ್ಯ ಎಂದು ಕರೆಯುತ್ತಾರೆ. ಎಸೆಸ್ಸೆಲ್ಸಿ ಬಳಿಕ ಆಚಾರ್ಯರ ಕೈ ಹಿಡಿದದ್ದು ಪೇಪರ್ ಏಜೆನ್ಸಿ. ಅಂದಿನಿಂದ ಇಂದಿನವರೆಗೆ ಸಾಗಿ ಬಂದ ಹಾದಿ ಬರೋಬ್ಬರಿ ೩೪ ವರ್ಷ. ೧೯೮೫ರಲ್ಲಿ ಕುಂದಾಪುರದ ಮುಖ್ಯರಸ್ತೆಯಲ್ಲಿ ಆಚಾರ್ಯ ಪುಸ್ತಕ ಮಳಿಗೆ ಪ್ರಾರಂಭಿಸಿದ ಆಚಾರ್ಯರು ವಾರಪತ್ರಿಕೆ, ದಿನಪತ್ರಿಕೆಗಳು, ಹೆಸರಾಂತ ಲೇಖಕರ ಪುಸ್ತಕಗಳನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿತರಿಸುತ್ತಿದ್ದಾರೆ.

ಪೇಪರ್ ಕೆಲಸ ದೇವರ ಕೆಲಸ:

ಸರಕಾರಿ ಆಸ್ಪತ್ರೆ, ಮಿನಿವಿಧಾನಸೌಧ, ಸರ್ಕಾರಿ ಬಸ್ ನಿಲ್ದಾಣ, ಹಾಸ್ಟೇಲ್, ಅಂಚೇಕಛೇರಿ, ವೃದ್ದಾಶ್ರಮಗಳಿಗೆ ಬೆಳಿಗ್ಗೆ ೪ ಗಂಟೆಗೆ ಎದ್ದು ದಿನನಿತ್ಯ ತಾವೇ ಸ್ವತಃ ಉಚಿತವಾಗಿ ಪೇಪರ್ ಹಾಕಿ ಬರುತ್ತಾರೆ. ತಾವು ಉಚಿತವಾಗಿ ನೀಡುವ ಪೇಪರ್ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ, ದಯವಿಟ್ಟು ನೀವು ಓದಿ, ಬೇರೆಯವರಿಗೆ ಓದಲು ಅವಕಾಶ ಮಾಡಿಕೊಡಿ ಎಂದು ಗೌರವ ಪ್ರತಿಗಳ ಮೇಲೆ ಬರೆಯುವ ಮೂಲಕ ಓದುಗರನ್ನು ಆಕರ್ಷಿಸುತ್ತಿದ್ದಾರೆ.

ಬಡವರಿಗೆ “ಆಚಾರ್ಯ”ದೇವೋಭವ:

ಎಂಟು ಖಾಸಗಿ ಆಸ್ಪತ್ರೆಗಳಿಗೆ ಕಮಿಶನ್ ಹಣ ಪಡೆಯದೇ ಪತ್ರಿಕೆ ವಿತರಿಸುತ್ತಿದ್ದಾರೆ. ಬಡಜನರು ಬಂದು ಕೂರುವ ಸ್ಥಳಗಳಲ್ಲಿ ದಿನವೂ ೧೫೦ಕ್ಕೂ ಅಧಿಕ ಪೇಪರ್ ಪ್ರತಿಗಳನ್ನು ಉಚಿತವಾಗಿ ನೀಡುವ ಮೂಲಕ ತನ್ನ ಸಂಪಾದನೆಯ ಒಂದು ಭಾಗ ಕನ್ನಡ ಸೇವೆಗಾಗಿಯೇ ಆಚಾರ್ಯರು ಮೀಸಲಿಟ್ಟಿದ್ದಾರೆ. ಅಲ್ಲದೇ ಕೆಲವೊಂದು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಪತ್ರಿಕೆಯ ಬಿಲ್ ಹಣದಲ್ಲಿ ಡಿಪಾಸಿಟ್ ಮಾಡಿ ಆ ಹಣದಲ್ಲಿ ಬಡವರಿಗೆ ಚಿಕಿತ್ಸೆ ನೀಡುವ ಮೂಲಕ ಆಚಾರ್ಯರು ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಕೇವಲ ಪ್ರಚಾರಕ್ಕಾಗಿ ಹಪಹಪಿಸುವ ಈ ದಿನಗಳಲ್ಲಿ ಆಚಾರ್ಯರ ಸಾಮಾಜಿಕ ಕಳಕಳಿ, ಬಡ ಜನರ ಮೇಲಿಟ್ಟಿರುವ ಪ್ರೀತಿ ಹಾಗೂ ಕನ್ನಡದ ಕಟ್ಟಾಳುವಾಗಿ ತೆರೆಮರೆಯಲ್ಲಿ ಶ್ರಮಿಸುತ್ತಿರುವ ಆಚಾರ್ಯರು ಅಪರೂಪಕ್ಕೆ ಒಬ್ಬರು. ಇವರು ನಮ್ಮ ನಡುವಿನ ಸೆಲ್ರೆಬ್ರಿಟಿಗಳು. ಆಚಾರ್ಯರಿಗೊಂದು ನಿಮ್ಮ ಹಾರೈಕೆಗಳಿರಲಿ: ಅವರ ನಂಬರ್:9242111298

ಚಿತ್ರ:ಬರಹ -ಶ್ರೀಕಾಂತ್ ಹೆಮ್ಮಾಡಿ