ಕುಂದಾಪುರ: ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ:

ಕುಂದಾಪುರ: ಒಳ ಚರಂಡಿ ಯೋಜನೆಯ ಕಾಮಗಾರಿಯಿಂದಾದ ಅವ್ಯವಸ್ಥೆಗೆ ಅಸಮಧಾನ. ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಸರಿಯಾಗಿ ದೊರಕುತ್ತಿಲ್ಲ ಎನ್ನುವ ದೂರು. ಹೆದ್ದಾರಿ ಇಲಾಖೆಯ ನಿರ್ಲಿಪ್ತ ಧೋರಣೆಗೆ ಆಕ್ರೋಶ. ೯೪ಸಿ ಅರ್ಜಿ ವಿಲೆವಾರಿಗಾಗಿ ಮನವಿ. ಹಾಳಾಗಿರುವ ರಸ್ತೆ ದುರಸ್ತಿಗೆ ಒತ್ತಾಯ. ಬಸ್ ನಿಲ್ದಾಣದ ಸಮಸ್ಯೆ ಪರಿಹಾರಕ್ಕೆ ಆಗ್ರಹ. ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ. ಇದು ಪುರಸಭಾ ವ್ಯಾಪ್ತಿಯ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಾಯಕ ಆಯುಕ್ತರ ಮುಂದಿಟ್ಟ ಸಮಸ್ಯೆಗಳ ಲಿಸ್ಟ್.

ಹೌದು.. ಮಂಗಳವಾರ ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ನಡೆದ ಪುರಸಭಾ ಸದಸ್ಯರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡ ಪರಿಯಿದು.

ಸಭೆಯ ಬಹುಪಾಲು ರಾಷ್ಟ್ರೀಯ ಹೆದ್ದಾರಿಯ ಅತಂತ್ರಗಳಿಗೆ ಮೀಸಲಾಗಿತ್ತು. ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಕೃತಕ ಸರೋವರ. ಚರಂಡಿಗಳ ಅವ್ಯವಸ್ಥೆ. ಅರ್ಧಕ್ಕೆ ನಿಂತಿರುವ ಫ್ಲೈ ಓವರ್, ಅಂಬ್ಯಾಕ್‌ಮೆಂಟ್ ಮುಂತಾದ ವಿಚಾರಗಳ ಕುರಿತು ಕೆಂಚನೂರು ಸೋಮಶೇಖರ ಶೆಟ್ಟಿ, ದೇವಕಿ ಸಣ್ಣಯ್ಯ, ಶ್ರೀಧರ ಶೇರುಗಾರ ಮುಂತಾದವರು ಪ್ರಶ್ನೆಗಳನ್ನು ಕೇಳಿದರು.

ಹೆದ್ದಾರಿಯ ಇಲಾಖೆಯ ಅಧಿಕಾರಿಗಳ ಹಾಗೂ ಗುತ್ತಿಗೆ ಕಂಪೆನಿಯ ಅಧಿಕಾರಿಗಳ ನಿರ್ಲಿಪ್ತತೆಯ ಬಗ್ಗೆ ಖಾರವಾಗಿ ಮಾತನಾಡಿದ ಬಿ.ಕಿಶೋರ್‌ಕುಮಾರ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗಾಗಿ ಸೆಕ್ಷನ್ ೧೩೩ ಅಡಿಯಲ್ಲಿ ಪ್ರಕರಣ ದಾಖಲಾದಾಗ ಹಿಂದಿನ ಉಪವಿಭಾಗಾಧಿಕಾರಿಗಳಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಫ್ಲೈ ಓವರ್ ಹಾಗೂ ಮೂರುಕೈ ಕಾಮಗಾರಿಯನ್ನು ಮುಗಿಸುವುದಾಗಿ ಭರವಸೆ ನೀಡಿದ್ದ ಕಂಪೆನಿ ತನ್ನ ಮಾತುಗಳನ್ನು ಉಳಿಸಿಕೊಂಡಿಲ್ಲ ಇದಕ್ಕೆ ಮುಂದಿನ ಕ್ರಮ ಏನು ? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಅವರು ಸುಮ್ಮನೆ ಚರ್ಚೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗೋದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಸಮಸ್ಯೆಗಳ ಪ್ರಸ್ತಾಪ:

ಕೋಡಿಯಲ್ಲಿ ೯೪ಸಿ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಿಗೆ ಸಿಆರ್‌ಝಡ್ ನೆಪಗಳನ್ನು ಹೇಳಿ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ. ಆದರೆ ವಾಸ್ತಾವವಾಗಿ ಇಲ್ಲಿ ಸಿಆರ್‌ಝಡ್ ಸಮಸ್ಯೆ ಇಲ್ಲ ಎಂದು ಬೊಟ್ಟು ಮಾಡಿದ ವಿಕಾಸ್ ಹೆಗ್ಡೆ, ಜನರಿಗೆ ಸಹಾಯವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಡಿದರು. ಇದಕ್ಕೆ ಪ್ರತಿ ಸ್ಪಂದಿಸಿದ ಉಪವಿಭಾಗಾಧಿಕಾರಿಗಳು, ಬಾಕಿ ಉಳಿದಿರುವ ಅರ್ಜಿ ವಿಲೆವಾರಿಗೆ ವಿಶೇಷ ಸಿಬ್ಬಂದಿಯ ನಿಯೋಜನೆ ಮಾಡಲಾಗುವುದು. ಸಿಆರ್‌ಝಡ್ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುವುದು. ತಿರಸ್ಕಾರಗೊಂಡಿರುವ ಅರ್ಜಿಗಳಿಗೆ ಸಕಾರಣಗಳನ್ನು ನೀಡಿ ತಮಗೆ ಮೇಲ್ಮನವಿ ಸಲ್ಲಿಸಿದ್ದಲ್ಲಿ ಕಾನೂನು ಚೌಕಟ್ಟಿನಲ್ಲಿ ಜನರಿಗೆ ಸಹಾಯ ಮಾಡುವುದಾಗಿ ಹೇಳಿದರು.

ಪ್ರತಿ ಮಳೆಗಾಲದಲ್ಲಿಯೂ ಮಿನಿ ವಿಧಾನಸೌಧ ಸೋರುತ್ತಿದೆ. ಇದರಿಂದಾಗಿ ಇಲ್ಲಿರುವ ಅಮೂಲ್ಯ ದಾಖಲೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ದಸಂಸ (ಭೀಮ ಘರ್ಜನೆ) ಯ ವಿಜಯ್ ಒತ್ತಾಯಿಸಿದರು. ಈ ವಿಚಾರದ ಕುರಿತು ಸಂಬಂಧಪಟ್ಟ ಇಲಾಖೆಗೆ ಸಲಹೆ ನೀಡುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದರು.

ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ. ವಸಂತಿ ಸಾರಂಗ್, ಅಬ್ಬು ಮಹಮ್ಮದ್, ಪ್ರಭಾಕರ, ಸಂತೋಷ್ ಶೆಟ್ಟಿ, ಅಶ್ವಿನಿ ಪ್ರದೀಪ್, ಗಿರೀಶ್, ಶೇಖರ, ಕಮಲಾ, ಸಂದೀಪ ಖಾರ್ವಿ, ಪ್ರಭಾವತಿ ಶೆಟ್ಟಿ, ಕೇಶವ ಭಟ್, ರಾಜೀವ್ ಕೋಟ್ಯಾನ್, ಕಿಶನ್‌ರಾಜ್ ಶೆಟ್ಟಿ, ವಿಜಯ್ ಕುಂದಾಪುರ, ರಾಜೇಶ್ ವಡೇರಹೋಬಳಿ, ರಾಜಾ ಬಿಟಿಆರ್ ಇದ್ದರು.