ಕುಂದಾಪುರ: ಹಿಂದೂ ರುಧ್ರಭೂಮಿ ಜಾಗದಲ್ಲಿ ತ್ಯಾಜ್ಯವಿಲೇವಾರಿ ಘಟಕ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

ಕುಂದಾಪುರ: ಹಿಂದೂ ರುಧ್ರಭೂಮಿ ಜಾಗದಲ್ಲಿ ತ್ಯಾಜ್ಯವಿಲೇವಾರಿ ಘಟಕ ಆರಂಭಿಸಲು ಮುಂದಾದ ಪಂಚಾಯಿತಿ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಲ್ಲಿನ ಕೊಟೇಶ್ವರ ಗ್ರಾಮಪಂಚಾಯಿತಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಪ್ರತೀ ಗ್ರಾ.ಪಂಚಾಯಿತಿಯಲ್ಲೂ ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪಿಸುವ ಕುರಿತು ಸರ್ಕಾರದ ಆದೇಶದ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ಒಣತ್ಯಾಜ್ಯ ವಿಲೇವಾರಿ ಘಟಕವನ್ನು ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಸರ್ಕಾರಿ ಹಿಂದೂ ರುಧ್ರಭೂಮಿ ಸ್ಥಳದಲ್ಲಿ ಪ್ರಾರಂಭಿಸಲು ಕೋಟೇಶ್ವರ ಗ್ರಾಮಪಂಚಾಯಿತಿ ಮುಂದಾಗಿತ್ತು. ಇದಕ್ಕಾಗಿಯೇ ಕಂದಾಯ ಇಲಾಖೆಯ ಅನುಮತಿ ಪಡೆದು ೧೦ಸೆಂಟ್ಸ್ ಜಾಗದಲ್ಲಿ ನಕ್ಷೆ ತಯಾರಿಸಲಾಗಿತ್ತು. ಹಿಂದೂ ರುಧ್ರಭೂಮಿ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸದಂತೆ ಸ್ಥಳೀಯರು ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸ್ಥಳೀಯರ ವಿರೋಧದ ನಡುವೆಯೂ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ತಯಾರಿ ನಡೆಸುತ್ತಿರುವುದನ್ನು ಮನಗಂಡ ಸ್ಥಳೀಯ ನಿವಾಸಿಗಳು ಮಂಗಳವಾರ ಬೆಳಿಗ್ಗೆ ಪಂಚಾಯತ್ ಎದುರು ಜಮಾಯಿಸಿ ಅಧ್ಯಕ್ಷೆ ಹಾಗೂ ಪಿಡಿಓ ವಿರುದ್ದ ಆಕ್ರೋಶ ಹೊರಹಾಕಿದರು.

ಕೇವಲ ಹೆಣ ಸುಡಲು ಮಾತ್ರ ಹಿಂದೂ ರುಧ್ರಭೂಮಿ ಜಾಗವನ್ನು ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮುಂದಾದರೆ ಮತ್ತೆ ಹೋರಾಟವನ್ನು ಕೈಗೆತ್ತಿಕೊಳ್ಳುತ್ತೇವೆ. ನಮ್ಮೆಲ್ಲರ ವಿರೋಧದ ನಡುವೆಯೂ ತ್ಯಾಜ್ಯವಿಲೇವಾರಿ ಘಟಕ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸುವುದಾದರೆ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಸ್ಥಳದಲ್ಲಿ ಪ್ರಾರಂಭಿಸಲಿ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಹಿಂದೂ ರುಧ್ರಭೂಮಿಯಲ್ಲಿ ತ್ಯಾಜ್ಯವಿಲೇವಾರಿ ಘಟಕ ಪ್ರಾರಂಭಿಸಲು ನಮ್ಮೆಲ್ಲರ ಬಲವಾದ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮಠದಬೆಟ್ಟು ವಾರ್ಡ್‌ನಲ್ಲಿ ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಕೇವಲ ಪೈಪ್ ಲೈನ್ ಮಾಡಿದ್ದಾರೆಯೇ ಹೊರತು ನೀರು ಕೊಡುತ್ತಿಲ್ಲ. ಸರಿಯಾದ ರಸ್ತೆಗಳಿಲ್ಲ ಎಂದರು.

ಮನವಿ ಸ್ವೀಕರಿಸಿ ಮತಾನಾಡಿದ ಪಂಚಾಯಿತಿ ಅಧ್ಯಕ್ಷೆ ಶಾಂತಾ ಗೋಪಾಲಕೃಷ್ಣ, ಕೋಟೇಶ್ವರ ಗ್ರಾಮಪಂಚಾಯಿತಿ ಅತೀ ದೊಡ್ಡ ಗ್ರಾ.ಪಂಚಾಯಿತಿ ಆಗಿರುವುದರಿಂದ ನಮ್ಮಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ಈಗಾಗಲೇ ಒಣತ್ಯಾಜ್ಯ ವಿಲೇವಾರಿ ಘಟಕವನ್ನು ಪಂಚಾಯಿತಿ ಕಟ್ಟಡದ ಮೇಲ್ಭಾದಲ್ಲೇ ನಡೆಸುತ್ತಿದ್ದೇವೆ. ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಲು ಸರ್ಕಾರಿ ಸ್ಥಳದ ಕೊರತೆಯಿಂದಾಗಿ ಹಿಂದೂ ರುಧ್ರಭೂಮಿಯ ಕೇವಲ ೧೦ ಸೆಂಟ್ಸ್ ಜಾಗದಲ್ಲಿ ಒಣ ತ್ಯಾಜ್ಯವಿಲೇವಾರಿ ಘಟಕ ಪ್ರಾರಂಭಿಸಲು ಮುಂದಾಗಿದ್ದೆವು. ಸ್ಥಳೀಯರಿಗೆ ಬೇಡ ಅಂದಮೇಲೆ ನಾವು ನಿಲ್ಲಿಸುತ್ತೇವೆ ಎಂದರು.

ಸ್ಥಳೀಯ ನಿವಾಸಿಗಳಾದ ಜಯಲಕ್ಷ್ಮೀ, ಸೂರ್ಯಕ್ರಾಂತಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು. ಈ ವೇಳೆಯಲ್ಲಿ ಪಿಡಿಓ ತೇಜಪ್ಪ ಕುಲಾಲ್ ಇದ್ದರು.