ಕುಂದಾಪುರ: ಪುರಸಭಾ ವ್ಯಾಪ್ತಿಯ ವಿನಾಯಕದಿಂದ ಸಂಗಮ್‌ವರೆಗಿನ ಚತುಷ್ಪತ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ವಿರುದ್ದ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶನಿವಾರ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಡಿಸೆಂಬರ್ ೩ ರಂದು ಮೊದಲ ಹಂತದ ಹೋರಾಟವಾಗಿ ಧರಣಿ ನಡೆಸಲು ಸಮಿತಿ ನಿರ್ಧರಿಸಿದೆ.
ಹೆದ್ದಾರಿ ಹೋರಾಟ ಜಾಗೃತಿ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ, ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಕುರಿತು ನಿರಂತರ ಹೋರಟ ನಡೆಸುತ್ತಾ ಬಂದಿದ್ದೇವೆ. ಇದುವರೆಗೆ ನಮಗೆ ಹೆದ್ದಾರಿಯ ಕಾಮಗಾರಿಯ ಚಿತ್ರಣ ಕೊಡುತ್ತಿಲ್ಲ. ಜನಪ್ರತಿನಿಧಿಗಳಿಗೂ ಈ ಬಗ್ಗೆ ಮಾಹಿತಿ ಇಲ್ಲ. ಈ ಹಿಂದೆ ಕುಂದಾಪುರ ತಾಲೂಕಿನ ೩೦ ಗ್ರಾಮ ಪಂಚಾಯಿತಿಗಳಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ಕುರಿತು ಸಭೆ ನಡೆಸಿ ಜನಾಭಿಪ್ರಾಯ ಪಡೆದು ಅದನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ್ದೇವೆ. ಜನರ ಭಾವನೆಗಳಿಗೆ ಪ್ರಾಧಿಕಾರ ಸ್ಪಂದಿಸುತ್ತಿಲ್ಲ.
ದುರಂತವೆಂದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಒಮ್ಮೆಯಾದರೂ ಕರೆಸಿಕೊಳ್ಳಲು ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಸರ್ವೀಸ್ ರಸ್ತೆ, ಎಂಬ್ಯಾಕ್‌ಮೆಂಟ್, ಫ್ಲೈ ಓವರ್ ಯಾವುದರ ಬಗ್ಗೆಯೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಫ್ಲೈಓವರ್ ಹಾಗೂ ಬಸ್ರೂರು ಮೂರುಕೈ ಬಳಿಯ ಎಂಬ್ಯಾಕ್‌ಮೆಂಟ್ ಗೊಂದಲದ ಗೂಡಾಗಿದೆ. ಅವೈಜ್ಞಾನಿಕ ಫ್ಲೈ ಓವರ್ ನಿರ್ಮಾಣದಿಂದ ಸಂಚಾರ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಕೊಟ್ಟು ಸಾಕಾಗಿದೆ. ಇನ್ನೇನಿದ್ದರೂ ಇಂತಹ ಅವ್ಯವಸ್ಥೆಯ ವಿರುದ್ದ ತೀವ್ರ ಸ್ವರೂಪದ ಹೋರಾಟವನ್ನು ಕೈಗೊಳ್ಳಬೇಕಿದೆ ಎಂದರು.
ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸದೆ ಬಸ್ರೂರು ಎಂಬ್ಯಾಕ್‌ಮೆಂಟ್ ಕಾಮಗಾರಿ ಆರಂಭಸಿದರೆ ವಾಹನ ಸಂಚಾರಕ್ಕೆ ಸಾಕಷ್ಟು ತೊಡಕಾಗುತ್ತದೆ ಎಂದು ಹಲವು ಬಾರಿ ಮನವಿ ಮಾಡಿಕೊಂಡರು ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಇದೀಗ ಸರ್ವೀಸ್ ರಸ್ತೆಯನ್ನೇ ರಾಷ್ಟ್ರೀಯ ಹೆದ್ದಾರಿಯನ್ನಾಗಲಿ ಮಾಡಲಾಗಿದೆ. ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕೆಟ್ಟು ನಿಂತರೆ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಹಿಂದೆ ಕುಂದಾಪುರದ ಸಹಾಯಕ ಆಯುಕ್ತರಾಗಿದ್ದ ಭೂಬಾಲನ್ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ ಬಿಟ್ಟರೆ ಬೇರಾವ ಅಧಿಕಾರಿಯೂ ಇದುವರೆಗೂ ಸ್ಪಂದಿಸಿಲ್ಲ. ನವಯುಗ ಗುತ್ತಿಗೆ ಕಂಪನಿ ಮೇಲೆ ಕನಿಕರ ತೋರಿಸುತ್ತಿದ್ದಾರೆಯೇ ವಿನಃ ಆ ಕಂಪೆನಿ ತಪ್ಪು ಮಾಡುತ್ತಿದೆ. ಅದರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಯಾವೊಬ್ಬ ಜನಪ್ರತಿನಿಧಿಯೂ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದ ಅವರು ಪಕ್ಷಾತೀತವಾಗಿ ಈ ಬಗ್ಗೆ ಹೋರಾಟ ನಡೆಸೋಣ ಎಂದು ಸಲಹೆ ನೀಡಿದರು.
ರಾಜಕೀಯವಾಗಿ ಬಳಕೆಯಾಗುತ್ತಿರುವುದು ದುರಂತ: ವಿಕಾಸ್ ಹೆಗ್ಡೆ
ಕುಂದಾಪುರ ಪುರಸಭಾ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೬೬ ರಾಜಕೀಯ ವಸ್ತುವಾಗಿ ಪರಿವರ್ತನೆಯಾಗಿದೆ. ಅಭಿವೃದ್ದಿ ವಿಚಾರದಲ್ಲಿ ಜನರಿಗೆ ಉಪಯೋಗ ಆಗಬೇಕಿದ್ದ ರಸ್ತೆ ರಾಜಕೀಯವಾಗಿ ಬಳಕೆಯಾಗುತ್ತಿರುವುದು ದುರಂತ. ಈ ಹೋರಾಟ ಅಧಿಕಾರಿಗಳಿಗೆ ತಟ್ಟಬೇಕಿದ್ದರೆ ತಾಲೂಕಿನ ಪ್ರತೀ ಗ್ರಾಮಪಂಚಾಯಿತಿಗಳಲ್ಲಿ ಹೆದ್ದಾರಿ ಕಾಮಗಾರಿ ಕೂಡಲೇ ಮುಗಿಸಲು ನಿರ್ಣಯ ಕೈಗೊಳ್ಳಬೇಕು. ನಾವು ವಿರೋಧ ಪಕ್ಷವಾಗಿ ಇದುವರೆಗೂ ನಮಗೆ ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಧರಣಿ ಮಾಡಲು ಸಾಧ್ಯವಾಗಿಲ್ಲ. ಇದರಲ್ಲಿ ನಮ್ಮ ಬೇಜವಾಬ್ದಾರಿಯೂ ಇದೆ ಎಂದರು.
ಸಿಪಿಐಎಂ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿದರು.
ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಶ್ರೀನಿವಾಸ ಮಲ್ಯರಂತಹ ದೂರದೃಷ್ಠಿಯುಳ್ಳ ರಾಜಕಾರಣಿಗಳು ಮೂಲೆಗುಂಪಾಗುತ್ತಾ ಹೋದರು. ಈಗ ಬರುವ ರಾಜಕಾರಣಿಗಳೆಲ್ಲರೂ ಶಿಕ್ಷಣ ಸಂಸ್ಥೆಯ, ಆಸ್ಪತ್ರೆಯ, ರಾಷ್ಟ್ರೀಯ ಹೆದ್ದಾರಿ ಟೋಲ್ ರಸ್ತೆಯ ಪಾಲುದಾರರಾಗಿದ್ದಾರೆ. ಇದು ನಮ್ಮ ದುರಂತ. ಇತ್ತೀಚಿನ ದಿನಗಳಲ್ಲಿ ಕಮ್ಯೂನಿಸ್ಟರು ಬಿಟ್ಟರೆ ಬೇರಾರು ಜನಪರ ಹೋರಾಟಗಳನ್ನು ನಡೆಸುತ್ತಿಲ್ಲ. ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಗಳು ಕೂಡ ಮಾಡಲಾಗುತ್ತಿದೆ. ನಿಜವಾಗಿಯೂ ಸಮಸ್ಯೆ ಇದ್ದವರು ಹೋರಾಟಕ್ಕೆ ಬರುತ್ತಿಲ್ಲ. ಕುಂದಾಪುರದ ಎರಡೂ ಸರ್ವೀಸ್ ರಸ್ತೆಯ ಇಕ್ಕೆಲಗಳಲ್ಲಿ ಇರುವ ಜನರು ಸೆಟೆದು ಹೋರಾಟಕ್ಕೆ ಇಳಿದರೆ ಒಂದೇ ದಿನದಲ್ಲಿ ಸಮಸ್ಯೆ ಇತ್ಯರ್ಥವಾಗುತ್ತದೆ. ಬಲಿಷ್ಠವಾದ ಪ್ರತಿಭಟನೆ ಮಾಡಿದರೆ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಬರುತ್ತಾರೆ ಎಂದರು.
ಉಗ್ರ ಹೋರಾಟ ಮಾಡುವುದು ಅನಿವಾರ್ಯ:
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿ, ಕುಂದಾಪುರದಿಂದ ಮಣಿಪಾಲಕ್ಕೆ ಹೆಚ್ಚು ಹೆಚ್ಚು ಆಂಬುಲೆನ್ಸ್‌ಗಳು ಹೋಗೊದು ಬೇಡ ಎಂಬ ಮನಸ್ಸಿದ್ದರೆ ನಾವು ಈ ಹೋರಾಟವನ್ನು ಉಗ್ರವಾಗಿ ನಡೆಸಲೇಬೇಕು. ಇಲ್ಲವೆಂದರೆ ಕುಂದಾಪುರದಿಂದ ಮಣಿಪಾಲಕ್ಕೆ ಆಂಬುಲೆನ್ಸ್‌ಗಳು ಹೋಗೋದು ಹೆಚ್ಚಾಗುತ್ತದೆ. ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಪತ್ರಕರ್ತರಿಗೂ ವರದಿ ಮಾಡಿ ಸಾಕಾಗಿದೆ. ಸೌಮ್ಯ ಹೋರಾಟ ಮಾಡಿದರೆ ಯಾರೂ ಎಚ್ಚೆತ್ತುಕೊಳ್ಳೋದಿಲ್ಲ. ಜನಪ್ರತಿನಿಧಿಗಳು ನಮ್ಮ ಮತ್ತು ಗುತ್ತಿಗೆ ಕಂಪೆನಿಯ ಮಧ್ಯೆ ಮೀಡಿಯೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಜನಪ್ರತಿನಿಧಿಗಳು ನಮ್ಮ ಜೊತೆ ನಿಲ್ಲಬೇಕು ಎಂದರು.
ಪುರಸಭಾ ಸದಸ್ಯರಾದ ಗಿರೀಶ್ ಜಿಕೆ, ಅಬು ಮೊಹಮ್ಮದ್, ಚಂದ್ರಶೇಖರ್ ಖಾರ್ವಿ, ದೇವಕಿ ಸಣ್ಣಯ್ಯ ಉಪಸ್ಥಿತರಿದ್ದರು.
ರಮೇಶ್ ಕಾಂಚನ್, ಉದಯ್ ಶೆಟ್ಟಿ ಪಡುಕೆರೆ, ಗಣೇಶ್ ಮೆಂಡನ್ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.












