ಕುಂದಾಪುರ: ತಾಲೂಕಿನಲ್ಲಿ ಕಾಡುತ್ತಿರುವ ಮರಳು ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘ ಸಿಐಟಿಯು ನೇತೃತ್ವದಲ್ಲಿ ಶಾಸಕರ ಮನೆಯತ್ತ ಪಾದಯಾತ್ರೆ ಆರಂಭಗೊಂಡಿದೆ.
ಸೋಮವಾರ ಬೆಳಿಗ್ಗೆ ೯.೩೦ಕ್ಕೆ ಕುಂದಾಪುರದ ವಿನಾಯಕ ಥಿಯೇಟರ್ನಿಂದ ಆರಂಂಭಗೊಂಡ ಕಾರ್ಮಿಕರ ಪಾದಯಾತ್ರೆಯು ಸಂಜೆ ಸುಮಾರು ೪ ಗಂಟೆಗೆ ಹಾಲಾಡಿಯಲ್ಲಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮನೆಗೆ ತಲುಪಿ ಶಾಸಕರಿಗೆ ಮನವಿ ನೀಡಲಿದೆ. ಪಾದಯಾತ್ರೆಯಲ್ಲಿ ವಿವಿಧ ಭಾಗದ ಸುಮಾರು ಮುನ್ನೂರಕ್ಕೂ ಅಧಿಕ ಕಾರ್ಮಿಕರು ಪಾಲ್ಗೊಂಡಿದ್ದು, ದಾರಿಯೂದ್ದಕ್ಕೂ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೋಟೇಶ್ವರ ಬೈಪಾಸ್, ಕಾಳಾವರ, ಹುಣ್ಸೆಮಕ್ಕಿ, ಬಿದ್ಕಲ್ಕಟ್ಟೆ ರಾಜ್ಯ ಹೆದ್ದಾರಿಯ ಮೂಲಕ ಸುಮಾರು ೨೫ಕ್ಕೂ ಅಧಿಕ ಕಿಮೀ ದೂರ ಸಾಗಿ ಶಾಸಕ ಶ್ರೀನಿವಾಸ ಶೆಟ್ಟಿಯವರಲ್ಲಿ ತಮ್ಮ ಮನವಿಯನ್ನು ಸಲ್ಲಿಸಲಿದ್ದಾರೆ.
ಮರಳು ಸಮಸ್ಯೆಯಿಂದಾಗಿ ಕೆಲಸಗಳಿಲ್ಲದೇ ಕಾರ್ಮಿಕ ಕುಟುಂಬಗಳು ಬೀದಿಗೆ ಬಿದ್ದಿವೆ. ಮರಳು ಸಮಸ್ಯೆ ಇತ್ಯರ್ಥಪಡಿಸಲು ಮಧ್ಯಪ್ರವೇಶಿಸಬೇಕಿದ್ದ ಸರ್ಕಾರ ನಿರ್ಲಕ್ಷ ಧೋರಣೆ ತಾಳುತ್ತಿದೆ. ಈ ಹಿಂದೆ ಮರಳು ನೀಡಲು ಆಗ್ರಹಿಸಿ ಕಾರ್ಮಿಕರು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಧರಣಿ ಕುಳಿತಾಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಆಗಮಿಸಿ ಅಕ್ಟೋಬರ್ ೧೫ಕ್ಕೆ ಕುಂದಾಪುರ ಹಾಗೂ ಬೈಂದೂರಿನಲ್ಲಿ ಮರಳುಗಾರಿಕೆ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದ ಎರಡು ಕಡೆಗಳಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ನೀಡಲಾಗಿದೆ.
ಎಲ್ಲಾ ನದಿಗಳಲ್ಲಿ ಮರಳುಗಾರಿಕೆ ಆರಂಭವಾದರೆ ಮರಳು ದರ ಕಡಿಮೆಯಾಗಿ ನಿರ್ಮಾಣ ಕ್ಷೇತ್ರ ಕೊಂಚಮಟ್ಟಿನ ಚೇತರಿಕೆ ಕಾಣಬಹುದು. ಸಿಆರ್ಝೆಡ್- ನಾನ್ ಸಿಆರ್ಝೆಡ್ನಲ್ಲಿ ಮರಳುಗಾರಿಕೆಗೆ ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಲು ಕಾರ್ಮಿಕ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಯು ದಾಸ ಭಂಡಾರಿ, ಪ್ರಧಾನಕಾರ್ಯದರ್ಶಿ ಸುರೇಶ್ ಕಲ್ಲಾಗರ ಮುಖಂಡರಾದ ಕೆ.ಶಂಕರ್, ಜಗದೀಶ್ ಆಚಾರ್, ಸಂತೋಷ್ ಹೆಮ್ಮಾಡಿ, ಅರುಣ್ ಕುಮಾರ್ ಗಂಗೊಳ್ಳಿ, ರಮೇಶ್ ಗುಲ್ವಾಡಿ ಮೊದಲಾದವರು ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ.