ಕುಂದಾಪುರ : ಯಾವುದೇ ಅಪರಾಧ ಪ್ರಕರಣಗಳು ಘಟಿಸಿದಾಗಲೂ ತನಿಖಾಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರದೇ ತನಿಖೆಯ ಹೊಣೆಯನ್ನು ನಿರ್ವಹಿಸುತ್ತಾರೆ. ಪ್ರಕರಣ ದಾಖಲಿಸುವ ಹಾಗೂ ದೂರು ನೀಡುವ ಸಂದರ್ಭದಲ್ಲಿ ಉಂಟಾಗುವ ಸಣ್ಣ ತಪ್ಪುಗಳಿಂದಾಗಿ ನ್ಯಾಯಾಲಯದ ವಾರಂಟ್ಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿಯೂ ತೊಡಕಾಗುತ್ತದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಎಸ್.ಪಿ ಕುಮಾರಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಲ್ಲಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ಸಂಜೆ ಪೊಲೀಸ್ ಇಲಾಖೆ, ಕುಂದಾಪುರ ಪೊಲೀಸ್ ಉಪ ವಿಭಾಗ ಹಾಗೂ ಅಭಿಯೋಜನೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಇಲ್ಲಿನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಕಾಶ ಖಂಡೇರಿ ಅವರನ್ನು ಗೌರವಿಸಿ ಮಾತನಾಡಿದರು.
ಅಪರಾಧಗಳಿಗೆ ದಂಡಗಳನ್ನು ವಿಧಿಸುವುದರಿಂದ ದೊಡ್ಡ ಪ್ರಮಾಣದ ಬದಲಾವಣೆಗಳಾಗುದಿಲ್ಲ. ಆದರೆ ಕಾನೂನು ಅಡಿಯಲ್ಲಿ ಅಪರಾಧಿಗೆ ಶಿಕ್ಷೆಯಾದಾಗ ಸಮಾಜಕ್ಕೆ ದೊಡ್ಡ ಸಂದೇಶ ರವಾನೆಯಾಗಿ ಅಪರಾಧಗಳ ಪ್ರಮಾಣ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶ ಪ್ರಕಾಶ ಖಂಡೇರಿಯವರ ವೃತ್ತಿ ದಕ್ಷತೆ ಹಾಗೂ ಬದ್ದತೆ ಸುತ್ಯರ್ಹ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು, ಧರ್ಮ ಕೇಂದ್ರಿತವಾದ ಸಮಾಜದ ನಿರ್ಮಾಣ ಕಾರ್ಯದಲ್ಲಿ ಎಲ್ಲರ ಪರಿಶ್ರಮದ ಅಗತ್ಯ ಇದೆ. ಗಾಂಧೀಜಿ ಕಂಡ ರಾಮರಾಜ್ಯದ ಸ್ಥಾಪನೆಯಾಗಬೇಕಾದರೆ ಅಧರ್ಮ ನಶಿಸಿ ಧರ್ಮ ನೆಲೆಯಾಗಬೇಕು ಎಂದರು.
ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಂಗೇಗೌಡ, ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್ ನಾಯಕ್, ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ನಾಗರತ್ನಮ್ಮ, ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ಬಾರ್ ಅಸೋಸೀಯೇಶನ್ ಅಧ್ಯಕ್ಷ ಸಳ್ವಾಡಿ ನಿರಂಜನ್ ಹೆಗ್ಡೆ, ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ಕುಮಾರ, ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಪ್ರವೀಣ್ ಎಚ್ ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕ ಪ್ರವೀಣ್ ನಾಯಕ್, ಉದಯ ಪ್ರಕಾಶ ಖಂಡೇರಿ, ಪ್ರಥ್ವೀಶಾ ಪಿ ಖಂಡರಿ ,ಬೈಂದೂರು ಸರ್ಕಲ್ ಇನ್ಸ್ಪೆಕ್ಟ್ರ್ ಪರಮೇಶ್ವರ ಗುಣಗ, ಉಪನಿರೀಕ್ಷಕರುಗಳಾದ ಹರೀಶ್ ಆರ್ ನಾಯಕ್, ತಿಮ್ಮೇಶ, ಶೇಖರ, ಶಿವಕುಮಾರ, ಸುದರ್ಶನ್, ಪುಷ್ಪಾ, ರಮೇಶ್ ಪವಾರ್ ಇದ್ದರು.
ಕುಂದಾಪುರದ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್ ನುಡಿ ನಮನ ಸಲ್ಲಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀಧರ ನಾಯಕ್ ಸ್ವಾಗತಿಸಿದರು, ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪ ನಾಯಕ್ ವಂದಿಸಿದರು.