ಜೋಪಡಿಯಲ್ಲೇ ಕಮರುತ್ತಿದೆ ಕೊರಗರ ಬೆಚ್ಚಗಿನ ಸೂರಿನ ಕನಸು!:ಕೊರಗರ ಕೊರಗು ಕೇಳೋರ್ಯಾರು?

ಕುಂದಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಷ್ಟೇ ಬಾರಿ ಗೆದ್ದು ಬಂದರೂ ಮೂಲನಿವಾಸಿಗಳ ಮೂಲಭೂತ ಸಮಸ್ಯೆಗಳು ಹಾಗೇ ಇರುತ್ತವೆ ಎಂಬುದಕ್ಕೆ ತಾಜಾ ಉದಾಹರಣೆ ಇದು. ಕಳೆದ ಹಲವು ವರ್ಷಗಳಿಂದ ಸುಭದ್ರ ಮನೆ ಇಲ್ಲದೆ, ತೆಂಗಿನಗರಿ, ಟಾರ್ಪಾಲಿನಡಿಯಲ್ಲಿ ಜೀವನ ಸಾಗಿಸುತ್ತಿರುವ ಕೊರಗ ಕುಟುಂಬವೊಂದರ ಕರುಣಾಜಕನಕ ಕತೆ ಇಲ್ಲಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟಿಗುಂಡಿಯಲ್ಲಿರುವ ಎರಡು ಕೊರಗ ಕುಟುಂಬಗಳು ಇಂದಿಗೂ ಸುಭದ್ರ ಮನೆ, ವಿದ್ಯುತ್ ಇಲ್ಲದೇ ಗುಡಿಸಲಿನಲ್ಲಿ ಭಯದ ನೆರಳಲ್ಲೇ ಜೀವನ ಸಾಗಿಸುತ್ತಿವೆ. ಜಡ್ಕಲ್ ಪಂಚಾಯತ್ ಕಾರ್ಯಾಲಯದ ಅನತಿ ದೂರದಲ್ಲಿರುವ ಜಡ್ಕಲ್-ಸಿದ್ದಾಪುರ ರಸ್ತೆಯಂಚಿನಲ್ಲಿರುವ ಕೊರಗರ ಜೋಪಡಿ ಇದುವರೆಗೂ ಯಾವ ಜನಪ್ರತಿನಿಧಿಗಳ, ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ವಿಪರ್ಯಾಸವೇ ಸರಿ. ಮೂಲನಿವಾಸಿಗಳು ಮುಖ್ಯವಾಹಿನಿಗೆ ಬರಬೇಕು ಎಂದು ಆಳುವ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಆ ಯೋಜನೆಗಳು ಮೂಲನಿವಾಸಿಗಳನ್ನು ತಲುಪುತ್ತಿಲ್ಲ ಎಂದರೆ ಸರ್ಕಾರಿ ವ್ಯವಸ್ಥೆ ಸತ್ತು ಹೋಗಿದೆ ಎಂಬುವುದು ಮಾತ್ರ ಕಟುಸತ್ಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದರ ಮೇಲೊಂದರಂತೆ ಚುನಾವಣೆಗಳು ಬರುತ್ತಲೇ ಇವೆ. ದಲಿತ ದಮನಿತರ ಏಳೆಗೆಯ ಅಜೆಂಡಾವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೊರಗ ಕಾಲನಿಗೆ ಮತ ಕೇಳಲು ಬರುತ್ತಾರೆ. ದುರಾದೃಷ್ಟವೆಂದರೆ ಈ ಕೊರಗರ ಕರುಣಾಜನಕ ಬದುಕು ಮಾತ್ರ ಇದುವರೆಗೂ ಯಾರ ಕಣ್ಣು ತೆರೆಸಿಲ್ಲ.

ಜೋಪಡಿಯಲ್ಲಿ ಜೀವನ:
ಜಡ್ಕಲ್ ವಾಟಿಗುಂಡಿಯಲ್ಲಿ ಕೊರಗ ನಿವಾಸಿಗಳಾದ ಮರ್ಲಿ ಹಾಗೂ ಬೀಚು ಕಳೆದ ಮೂರು ದಶಕಗಳಿಂದ ವಾಸವಾಗಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ಈ ಎರಡು ಕುಟುಂಬಗಳ ಶೋಚನೀಯ ಸ್ಥಿತಿ ಕಂಡು ಪಂಚಾಯತ್ ಎರಡೂ ಕುಟುಬಗಳಿಗೂ ಮನೆಯನ್ನು ಕಲ್ಪಿಸಿಕೊಟಿತ್ತು. ಬಳಿಕ ಮನೆ ರಿಪೇರಿ ಕಾಣದೆ ಬೀಳುವ ಹಂತಕ್ಕೆ ತಲುಪಿದ್ದರಿಂದ ಇದೀಗ ಎರಡೂ ಕುಟುಂಬಗಳು ಅಲ್ಲೇ ಪಕ್ಕದಲ್ಲೇ ಜೋಪಡಿ ಕಟ್ಟಿಕೊಂಡು ಜೀವನ ನಡೆಸುತ್ತಿದೆ.

ಮಳೆಗಾಲದ ಆತಂಕ:
ಎರಡೂ ಕೊರಗ ಕುಟುಂಬಗಳು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಜೋಪಡಿ ಇದೀಗ ನೆಲಸಮವಾಗುವ ಅಂಚಿನಲ್ಲಿದೆ. ತೆಂಗಿನ ಗರಿಗಳು ಹಾಗೂ ಟಾರ್ಪಾಲಿನ ನಡೆರಳಲ್ಲಿ ದಿನ ದೂಡುತ್ತಿದ್ದ ಕುಟುಂಬಗಳಿಗೆ ಇದೀಗ ಮಳೆಗಾಲದ ಆತಂಕ ಎದುರಾಗಿದೆ. ಬೀಚು ಮಹಿಳೆಯ ಜೋಪಡಿಯ ಸ್ಥಿತಿ ಹೇಳತೀರದು. ಹೀಗಾಗಿಯೇ ಮಳೆಗಾಲಕ್ಕಾಗಿ ಇನ್ನೊಂದು ತಾತ್ಕಾಲಿಕವಾದ ಮನೆಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ಶಿಕ್ಷಣವನ್ನೇ ಕಸಿದುಕೊಂಡಿತು ಅನಾರೋಗ್ಯ!:
ಇಲ್ಲಿನ ಕೊರಗರು ಪಡುತ್ತಿರುವ ಕಷ್ಟ ನೋಡಿದರ ಎಂತವರ ಹೃದಯವೂ ಕರಗದೆ ಇರದು. ಈ ಕಾಲನಿಯ ಹನ್ನೆರಡು ವರ್ಷದ ಬಾಲಕಿ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಹುಟ್ಟಿನಿಂದ ಮೂತ್ರದ ಸಮಸ್ಯೆಯಿಂದ ಬಳುತ್ತಿರುವ ಬಾಲಕಿಯ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿದ್ದಾರೆ. ಮಂಗಳೂರಿನ ಎನಾಪೋಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು ವೈದ್ಯರು ನರದ ಸಮಸ್ಯೆಯಿಂದ ಮೂತ್ರದ ಮೇಲೆ ಹಿಡಿತ ಸಾಧಿಸಲಾಗುತ್ತಿಲ್ಲ ಎಂದಿದ್ದು, ಶಸ್ತೃ ಚಿಕಿತ್ಸೆಯಾದರೆ ಶೆಕಡಾ ನೂರರಷ್ಟು ಸರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಕೂಲಿಯನ್ನೇ ನೆಚ್ಚಿಕೊಂಡ ಕುಟುಂಬ ವೈದ್ಯಕೀಯ ವೆಚ್ಚ ಭರಿಸಲಾಗದೆ ಮನೆಗೆ ವಾಆಸ್ಸಾಗಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದಲೂ ಶಾಲೆಗೂ ಹೋಗದೆ ಮನೆಯಲ್ಲೇ ಕೂತಿರುವ ಬಾಲಕಿಯ ಚಿಕಿತ್ಸೆಗೆ ಸರ್ಕಾರ ಸ್ಪಂದಿಸಬೇಕಿದೆ. ಹನ್ನೆರಡು ವರ್ಷಗಳಿಂದ ಪ್ಯಾಡ್ ಬಳಸುತ್ತಿದ್ದು, ಒಂದು ವಾರಕ್ಕಾಗುವಷ್ಟು ಪ್ಯಾಡ್‌ಗೆ ೬೦೦ ರೂ. ಭರಿಸಬೇಕಾಗಿದ್ದು, ಮರ್ಲಿ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಐಟಿಡಿಪಿ ಇಲಾಖೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸುವ ಅವಕಾಶವಿದ್ದರೂ ಗಮನ ಹರಿಸುತ್ತಿಲ್ಲ. ಶಾಲೆಗೆ ಹೋಗಬೇಕು ನಾಲ್ಕು ಅಕ್ಷರ ಕಲಿತು ಮನೆಯ ಕಷ್ಟಗಳಿಗೆ ಹೆಗಲು ಕೊಡಬೇಕು ಎನ್ನುವ ಬಾಲಕಿಯ ಕನಸು ಕಮರಿ ಹೋಗುತ್ತಿದೆ.                                                                                                            –ಶ್ರೀಕಾಂತ್ ಹೆಮ್ಮಾಡಿ