ಆಲೂರು: ಆಮೆ ಮತ್ತು ಕೂಮಾ ಹತ್ಯೆ ಆರೋಪಿಗಳ ಬಂಧನ

ಕುಂದಾಪುರ: ಆಲೂರು ಗ್ರಾಮದ ಕಳಿ ಎಂಬಲ್ಲಿನ ನದಿಯಲ್ಲಿ ಆಮೆ ಹಾಗೂ ಕೂಮಾಗಳನ್ನು ಹಿಡಿದು ಕೊಲ್ಲಲು ಪ್ರಯತ್ನ ನಡೆಸುತ್ತಿರುವಾಗ ದಾಳಿ ನಡೆಸಿದ್ದ ಕೊಲ್ಲೂರು ವನ್ಯಜೀವಿ ಇಲಾಖೆಯ ಸಿಬ್ಬಂದಿಗಳು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕೊಲ್ಲೂರಿನ ನಿವಾಸಿಗಳಾದ ಶೀನ ಕೊರಗ, ಚಂದ್ರ ಹಾಗೂ ಗಣೇಶ ಎನ್ನುವ ಆರೋಪಿಗಳನ್ನು ಬಂಧಿಸಿ ಅವರಿಂದ ೯ ಜೀವಂತ ಆಮೆ ಹಾಗೂ ೨೬ ಜೀವಂತ ಕೂಮಾ, ಸೋಮವಾರ ಹಿಡಿದು ಕೊಲ್ಲಲಾದ ೧೫ ಆಮೆಗಳ ಚಿಪ್ಪು ಹಾಗೂ ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ರಾತ್ರಿ ಗಸ್ತು ನಡೆಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಂಗಳವಾರ ಮುಂಜಾನೆ ಆರೋಪಿಗಳು ನಡೆಸುತ್ತಿದ್ದ ಕೃತ್ಯದ ಮಾಹಿತಿ ದೊರೆತು ದಾಳಿ ನಡೆಸಿದ್ದಾರೆ.

ವಶಪಡಿಸಿಕೊಂಡಿರುವ ಆಮೆಯೂ ಅರಣ್ಯ ಇಲಾಖೆಯ ಕಾನೂನು ಶೆಡ್ಯೂಲ್೧ ಭಾಗ ೨ ರ ಪ್ರಕಾರ ಹೆಚ್ಚಿನ ಸಂರಕ್ಷಣೆಯ ಪ್ರಾಣಿಯಾಗಿರುವುದರಿಂದ ಬಂಧಿತ ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣೆ ಕಾಯಿದೆ ೧೯೭೨ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಸಂಜೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗಣಪತಿ ನಾಯ್ಕ್ ಅವರ ನಿರ್ದೇಶನದಲ್ಲಿ ಉಪ ವಲಯಾರಣ್ಯಾಧಿಕಾರಿ ದಯಾನಂದ ಕೆ, ಸಿದ್ದೇಶ್ವರ ಕುಂಬಾರ, ದೇವಿ ಪ್ರಸಾದ್, ಅರಣ್ಯ ರಕ್ಷಕ ವಿವೇಕ್ ಹಾಗೂ ಇಡೂರು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.