ಕುಂದಾಪುರ : ತನ್ನನ್ನು ವೃದ್ಧಾಶ್ರಮದಲ್ಲಿ ಗೃಹ ಬಂಧನದಲ್ಲಿ ಇರಿಸಿರುವ ಕುರಿತು ಉಪವಿಭಾಗಾಧಿಕಾರಿಯವರಿಗೆ ಹಿರಿಯ ನಾಗರಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಪ್ರಕರಣದ ತನಿಖೆ ನಡೆದಿದೆ.
ಸ್ಥಳೀಯ ವೃದ್ಧಾಶ್ರವೊಂದರ ನಿಲಯವಾಸಿಯಾಗಿ ಸೇರ್ಪಡೆಯಾಗಿರುವ ಹಿರಿಯಡ್ಕದ ನಿವಾಸಿ ಮಂಜುನಾಥ ಜೋಗಿ ಎನ್ನುವವರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಯೋಗ ಕ್ಷೇಮಾಧಿಕಾರಿ ಗಣೇಶ್ ಮರಾಠೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಪ್ರಕರಣದ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಜು.10 ರಂದು ವೃದ್ಧಾಶ್ರಮಕ್ಕೆ ಬಂದಿರುವ ನನ್ನನ್ನು ಗೃಹಬಂಧನದಲ್ಲಿ ಇರಿಸಲು ಮಂಗಳೂರಿನಲ್ಲಿ ಇರುವ ನನ್ನ ಪುತ್ರ ಇಲ್ಲಿಯವರಿಗೆ ಸೂಚಿಸಿದ್ದಾನೆ. ಹಿರಿಯಡ್ಕದಲ್ಲಿ ಇರುವ ನನ್ನ ಸ್ವಂತ ಮನೆಯನ್ನು ಬಾಡಿಗೆಗೆ ನೀಡಿದ್ದಾನೆ. ನಾನು ನನ್ನ ಸ್ವಂತ ಮನೆಗೆ ಹೋಗಲು ಇಚ್ಚಿಸಿದ್ದು, ಅಲ್ಲಿರುವ ಬಾಡಿಗೆದಾರರನ್ನು ಎಬ್ಬಿಸಿ ನನಗೆ ವಾಸ್ತವ್ಯ ಮಾಡಲು ಅನೂಕೂಲ ಮಾಡಿಕೊಡುವಂತೆ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ ವೃದ್ಧಾಶ್ರಮದವರು ಮಂಜುನಾಥ ನಾಯ್ಕ್ ಅವರಿಗೆ ಯಾವುದೆ ರೀತಿಯ ಗೃಹ ಬಂಧನ ಹಾಕಿಲ್ಲ, ಸುರಕ್ಷತೆಯ ದೃಷ್ಟಿಯಿಂದ ಹೆದ್ದಾರಿಯ ಬದಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಅವರು ಇಂದು ಕೂಡ ತಮ್ಮ ಕೆಲಸಕ್ಕಾಗಿ ಅಂಚೆ ಕಚೇರಿಗೆ ಹೋಗಿ ಬಂದಿದ್ದಾರೆ ಎಂದು ಸಮಜಾಯಿಕೆ ನೀಡಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದುಕೊಂಡ ತನಿಖಾಧಿಕಾರಿಗಳು, ವೃದ್ಧಾಶ್ರಮದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳ ಕುರಿತು ಸೂಚನೆ ನೀಡಿದರು. ತನಿಖೆಯ ಮಾಹಿತಿ ಹಾಗೂ ವರದಿಯನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಮುಂದಿನ ವಿಚಾರಣೆ ನಡೆಯಲಿದೆ.