ಧರ್ಮರಕ್ಷಣೆಯ ಹೆಸರಲ್ಲಿ ಹಿಂದೂಗಳನ್ನೇ ಕೊಲೆಗೈಯ್ಯಲಾಗುತ್ತಿದೆ: ಸಂತೋಷ್ ಕುಮಾರ್ ಬಜಾಲ್

ಕುಂದಾಪುರ: ಪ್ರತೀ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಠಿಸುತ್ತೇವೆಂದು‌ ಕೇಂದ್ರದಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ‌ ಸರ್ಕಾರ ಉದ್ಯೋಗಗಳನ್ನು ಸೃಷ್ಠಿಸದೆ ಯುವಕರನ್ನು ತಪ್ಪು ದಾರಿಗೆಳೆಯುತ್ತಿದೆ. ಹಿಂದೂ ಧರ್ಮರಕ್ಷಣೆಯ ಹೆಸರಿನಲ್ಲಿ ಇಂದು ಹಿಂದೂಗಳನ್ನೇ ಕೊಲೆಗೈಯ್ಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಡಿವೈಎಫ್ಐನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಂತೋಷ್ ಕುಮಾರ್ ಬಜಾಲ್ ಕಳವಳ ವ್ಯಕ್ತಪಡಿಸಿದರು.
ಅವರು ಭಾನುವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ನಿರುದ್ಯೋಗದ ವಿರುದ್ದ, ಸ್ಥಳೀಯ ಉದ್ಯೋಗದ ಸೃಷ್ಠಿಗಾಗಿ, ಸೌಹಾರ್ದ ಸುಂದರ ಸಮಾಜದ ನಿರ್ಮಾಣಕ್ಕಾಗಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ 15 ನೇ ಕುಂದಾಪುರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮದ ಹೆಸರಿನಲ್ಲಿ ತಳ ಸಮುದಾಯದ ಯುವಕರನ್ನು‌ ಬಲುಪಶುಗಳನ್ನಾಗಿ ಮಾಡಲಾಗುತ್ತಿದ್ದು, ಯುವಕರ ಮನಸ್ಸಲ್ಲಿ ಕೋಮು‌ವಿಷಬೀಜವನ್ನು ಭಿತ್ತಿ ಅವರನ್ನು ದಾರಿ‌ ತಪ್ಪಿಸುವ ಪಿತೂರಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಧರ್ಮಗಳ ಮಧ್ಯೆ ಗೋಡೆಗಳನ್ನು ಕಟ್ಟಿ ಜನರನ್ನು ವಿಂಗಡಿಸುವ ಸಂಚನ್ನು ಡಿವೈಎಫ್ಐ ಕಟುವಾಗಿ ಖಂಡಿಸುತ್ತದೆ ಎಂದು ಸಂತೋಷ್ ಕುಮಾರ್ ಬಜಾಲ್ ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಎಫ್ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ, ನಮ್ಮ ಯುವಜನರು ಮಹಾನ್ ನಾಯಕರುಗಳಾದ ಭಗತ್ ಸಿಂಗ್, ಚೆಗುವೆರಾ, ವಿವೇಕಾನಂದರನ್ನು ಪ್ರಚಾರಕ್ಕಾಗಿ ಮಾತ್ರ ಬಳಸಿಕೊಳ್ಳತ್ತಿದ್ದು, ಅವರ ವಿಚಾರಧಾರೆಗಳನ್ನು ನಿಜವಾಗಿಯೂ ಮೈಗೂಡಿಸಿಕೊಳ್ಳುತ್ತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಕೋಣಿ, ಯುವ ಸಾಹಿತಿ ಸಚಿನ್‌ ಅಂಕೋಲಾ, ಜನವಾದಿ ಮಹಿಳಾ‌ ಸಂಘಟನೆಯ ತಾಲೂಕು ಮುಖಂಡರಾದ ನಾಗರತ್ನ ನಾಡಾ, ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಉಪಸ್ಥಿತರಿದ್ದರು.
ದ್ವಜರೋಹಣವನ್ನು ಡಿವೈಎಫ್ಐ ಮಾಜಿ ಮುಖಂಡ ಎಚ್. ನರಸಿಂಹ ನೆರವೇರಿಸಿದರು. ತಾಲೂಕು ಕಾರ್ಯದರ್ಶಿ ರಾಜೇಶ ವಡೇರಹೋಬಳಿ ಸಂಘಟನಾ ಕರಡು ವರದಿಯನ್ನು ವಾಚಿಸಿದರು. ಗಣೇಶ್ ದಾಸ್ ಸ್ವಾಗತಿಸಿದರು. ರವಿ ವಿ ಎಮ್ ಧನ್ಯವಾದವಿತ್ತರು.
23 ಸದಸ್ಯರನ್ನೊಳಗೊಂಡ ತಾಲೂಕು ಸಮಿತಿಯನ್ನು ರಚಿಸಲಾಗಿದ್ದು, ಡಿವೈಎಫ್ಐನ ನೂತನ ತಾಲೂಕು ಅಧ್ಯಕ್ಷರಾಗಿ ರಾಜೇಶ್ ವಡೇರಹೋಬಳಿ, ನೂತನ ಕಾರ್ಯದರ್ಶಿಯಾಗಿ ಗಣೇಸ್ ದಾಸ್ ಸಮ್ಮೇಳನದಲ್ಲಿ ಆಯ್ಕೆಯಾದರು. ಡಿವೈಎಫ್ಐ ರಾಜಾ ಬಿಟಿಆರ್, ಗಣೇಶ್ ಕಲ್ಲಾಗರ, ಕಿರಣ್ ಪಡುಕೋಣೆ, ಅರುಣ್ ಕುಮಾರ್ ಗಂಗೊಳ್ಳಿ, ಅಕ್ಷಯ ವಡೇರಹೋಬಳಿ, ಮಂಜುನಾಥ್ ಶೋಗನ್ ಮೊದಲಾದವರು ಉಪಸ್ಥಿತರಿದ್ದರು.