ಕುಂದಾಪುರ: ರಾಜ್ಯಗಳ ಒಕ್ಕೂಟಗಳನ್ನೊಳಗೊಂಡ ಪ್ರಬಲ ಕೇಂದ್ರವನ್ನು ಹೊಂದಿರುವ ರಾಷ್ಟ್ರ ನಮ್ಮದು. ನಮ್ಮ ದೇಶದಲ್ಲಿ ಮೂರುವರೆ ಸಾವಿರ ಜಾತಿಗಳಿದ್ದರೂ ಎಲ್ಲಾ ಜಾತಿ-ಧರ್ಮಗಳ ಜನರು ಸಮಾನವಾಗಿ ಬದುಕುವ ಹಕ್ಕನ್ನು ಈ ದೇಶದ ಸಂವಿಧಾನ ನೀಡಿದ್ದು,ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ನಮ್ಮೊಳಗೆ ಐಕ್ಯತೆ, ಒಗ್ಗಟ್ಟನ್ನು ಬೆಳೆಸಬೇಕು. ನಾವೆಲ್ಲರೂ ತಾಯಿ ಭಾರತಾಂಬೆಯ ಮಕ್ಕಳೆಂಬ ಹೆಮ್ಮೆ ಹೆಚ್ಚಿಸಬೇಕು ಎಂದು ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಹೇಳಿದರು.
ಅವರು ಕುಂದಾಪುರ ತಾಲೂಕು ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ೭೧ನೇ ಗಣರಾಜ್ಯೋತ್ಸವದ ದ್ವಜಾರೋಹಣಗೈದು ಗಣರಾಜ್ಯೋತ್ಸವ ಸಂದೇಶ ಸಾರಿದರು.
ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ, ಪಿಎಸ್‌ಐ ಹರೀಶ್ ಆರ್.ನಾಯ್ಕ್ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಎನ್‌ಸಿಸಿ, ನೆವಿ, ಸ್ಕೌಟ್, ಗೈಡ್ಸ್, ಸೇವಾದಳದಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕುಂದಾಪುರ ಸಂತ ಜೋಸೇಫರ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಪಥಸಂಚಲನದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.
ಅಪ್ಪನಂತೆ ಎಸಿಯಾಗುತ್ತೇನೆ: ಒಂದು ನಿಮಿಷ ಎಎಸ್ಪಿ ಆದ ಎಸಿ ಪುತ್ರ!
ಗಣರಾಜ್ಯೋತ್ಸವದ ಪಥ ಸಂಚಲನ ಮುಗಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮೊದಲು ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಅವರ ಪುತ್ರ ಒಂದು ನಿಮಿಷ ಪೊಲೀಸ್ ಆಗಿ ನೆರೆದವರ ಗಮನ ಸೆಳೆದರು. ಕುಂದಾಪುರದ ಓಕ್‌ವುಡ್ ಇಂಡಿಯನ್ ಸ್ಕೂಲ್‌ನಲ್ಲಿ ಎರಡನೇ ತರಗತಿ ಓದುತ್ತಿರುವ ಸಹಾಯಕ ಆಯುಕ್ತರ ಪುತ್ರ ಶ್ರೀಹರ್ಷ ಎಎಸ್ಪಿ ಹರಿರಾಮ್ ಶಂಕರ್ ಅವರ ಪೊಲೀಸ್ ಟೋಪಿ ಹಾಗೂ ದಂಡ ಹಿಡಿದು ಎಎಸ್ಪಿಯವರ ಜೊತೆ ಫೋಟೊಗೆ ಫೋಸ್ ಕೊಟ್ಟರು. ನಾನು ಅಪ್ಪನಂತೆಯೇ ಎಸಿಯಾಗುತ್ತೇನೆ ಎಂದು ಏಳರ ಹರಯದ ಪುಟ್ಟ ಪೋರ ಶ್ರೀಹರ್ಷ ನಗುತ್ತಲೇ ಹೇಳಿದರು. ಈ ವೇಳೆಯಲ್ಲಿ ಸ್ವತಃ ಸಹಾಯಕ ಆಯುಕ್ತರೇ ತಮ್ಮ ಮಗನ ಫೋಟೋ ಕ್ಲಿಕ್ಕಿಸಿದ ದೃಶ್ಯ ಕಂಡಬಂದವು.
ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ(ಬೋರ್ಡ್ ಹೈಸ್ಕೂಲ್)ದ ಎಲ್ಲಾ ೩೫೭ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಸಮೂಹ ನೃತ್ಯ ಪ್ರದರ್ಶನ ಆಕರ್ಷಣೀಯವಾಗಿ ಮೂಡಿಬಂದಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್‍ಯಕ್ರಮ ಜರುಗಿದವು.
ತಾಲೂಕು ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಸ್ವಾಗತಿಸಿದರು. ಸೈಂಟ್ ಮೇರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ವಂದಿಸಿದರು.