ಕುಂದಾಪುರ: ವಲಸೆ ಕಾರ್ಮಿಕರು ಅತಂತ್ರ, ಕೆಲಸವೂ ಇಲ್ಲ, ಊರಿಗೂ ಹೋಗಂಗಿಲ್ಲ, ಹೊತ್ತಿನ ಊಟಕ್ಕೂ ಸಂಕಷ್ಟ

ಕುಂದಾಪುರ: ಕೆಲಸ ಹುಡುಕಿ ಬೇರೆ ಕಡೆಯಿಂದ ಬಂದ ಕಾರ್ಮಿಕರು ಕೆಲಸ ಇಲ್ಲದೆ, ಊರಿಗೆ ಮರಳಲು ವಾಹನ ವ್ಯವಸ್ಥೆಯೂ ಇಲ್ಲದೆ ಕಾಲ್ನಡಿಗೆಯಲ್ಲಿ ಗಂಟು-ಮೂಟೆ ಹೊತ್ತು ಸಾಗುತ್ತಿರುವ ದೃಶ್ಯ ರಾ.ಹೆದ್ದಾರಿಯೂದ್ದಕ್ಕೂ ಶನಿವಾರ ಕಂಡುಬಂದಿದೆ.

ಮಕ್ಕಳು, ಮೃದ್ದರು, ಪುರುಷರು ಹಾಗೂ ಮಹಿಳೆಯರೂ ಸೇರಿದಂತೆ ಸಾಕಷ್ಟು ಕಾರ್ಮಿಕರು ಗುಂಪು ಗುಂಪಾಗಿ ಚಪ್ಪಲಿ ಇಲ್ಲದೆ ನಡೆದುಕೊಂಡು ಹೋಗುವ ದೃಶ್ಯಗಳು ಕರುಣಾಜನಕವಾಗಿದೆ. ಮಂಗಳೂರಿಂದ ಶುಕ್ರವಾರ ಹೊರಟ ಬಾಗಲಕೋಟೆ ಮೂಲದ ಕಾರ್ಮಿಕರ ಗುಂಪು ಶನಿವಾರ ಮಧ್ಯಾಹ್ನ ಕುಂದಾಪುರ ಸಮೀಪ ಹೆಮ್ಮಾಡಿ ತಲುಪಿದೆ.

ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್ ಆದ ಹಿನ್ನೆಲೆ ಕೆಲಸವೂ ಇಲ್ಲದಂತಾಗಿದೆ. ಕೈಯಲ್ಲಿ ಹಣವೂ ಇಲ್ಲದೆ ಹೇಗಾದರೂ ಊರಿಗೆ ತಲುಪಿ ಜೀವ ಉಳಿಸಿಕೊಳ್ಳಲು ಹೊರಟಿದ್ದೇವೆ. ಯಾರಾದರೂ ನಮ್ಮನ್ನು ಊರಿಗೆ ಮುಟ್ಟಿಸಲು ಸಹಕಾರ ನೀಡಬೇಕು ಎಂದು ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯ ನಿಜಕ್ಕೂ ಕರಳು ಕಿವುಚುವಂತಿತ್ತು. ನಿಮ್ಮನ್ನು ಊರಿಗೆ ಕಳುಹಿಸಲು ಶಿರೂರು ಗೇಟ್‌ನಿಂದ ಮುಂದಕ್ಕೆ ಹೋಗೋದಕ್ಕೆ ಬಿಡೋದಿಲ್ಲ. ಎಲ್ಲಿಯಾದರೂ ಶೆಲ್ಟರ್ ಮಾಡಿ ಸದ್ಯಕ್ಕೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡುವ ಎಂದರೂ ಒಪ್ಪದ ಕಾರ್ಮಿಕರು ಮುಂದಿನ ಚೆಕ್ ಪೋಸ್ಟ್‌ನಲ್ಲಿ ಹೋಗಲು ಬಿಡದಿದ್ದರೆ ಅಲ್ಲೇ ಉಳಿದುಕೊಳ್ಳುತ್ತೇವೆ ಎಂದಿದ್ದಾರೆ.