ಕುಂದಾಪುರ: ಸಾಗುವಾನಿ ಮರ ಕಡಿದು ಗೃಹಪಯೋಗಿ ವಸ್ತುಗಳಿಗೆ ಬಳಸಲು ತಯಾರು ಮಾಡಿ ಇಟ್ಟಿದ್ದ ಮನೆಗೆ ಕೊಲ್ಲೂರು ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ವಂಡ್ಸೆ ಗ್ರಾಮದ ಹಳ್ಳಿಬೇರು ವಿಜಂii (31) ಎಂಬವನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಶಿರಸಿ ಹಾಲಗಲ್ ನಿವಾಸಿ ಸಮೀಉಲ್ಲಾ (19) ಪರಾರಿಯಾಗಿದ್ದಾರೆ. 1 ಲಕ್ಷ ರೂ ಮೌಲ್ಯದ ಸಾಗುವಾನಿ ಮರ ವಶಕ್ಕೆ ಪಡೆಯಲಾಗಿದೆ.
ವಂಡ್ಸೆ ಗ್ರಾಮದ ಚಿತ್ತೂರು ವಲಯ ರಕ್ಷಿತಾರಣ್ಯದಲ್ಲಿ ವನ್ಯಜೀವ ಸಂರಕ್ಷಣಾ ವಿಭಾಗದವರು ಸಾಗುವಾನಿ ಮರ ಬೆಳೆಸಿದ್ದರು. ಕಳೆದ ಕೆಲ ದಿನಗಳ ಹಿಂದೆ ರಾತ್ರಿ ಸಾಗುವಾನಿ ಮರಕಳವು ಮಾಡಿ ಮನೆಯಲ್ಲಿ ದ್ವಾರಬಾಗಿಲಿಗಾಗಿ ಸೈಜ್ ಮಾಡಿ ಇಡಲಾಗಿತ್ತು. ಸಾಗುವಾನಿ ಮರ ಕಳವು ವೈಲ್ಡ್ ಲೈಪ್ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ರಾತ್ರಿ ಗಸ್ತು ನಡೆಸಿದರೂ ಮರಗಳ್ಳರು ತಪ್ಪಿಸಿಕೊಳ್ಳುತ್ತಿದ್ದರು. ಮರಕಳವು ಮಾಡುತ್ತಿರುವವರು ಸ್ಥಳಿಯರೆಂಬ ಅನುಮಾನ ಕೂಡಾ ಇದ್ದಿತ್ತು.
ಶನಿವಾರ ಹಳ್ಳಿಬೇರು ಎಂಬಲ್ಲಿ ಸಾಗುವಾನಿ ಮರ ಕಡಿದು ಸೈಜ್ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಕೊಲ್ಲೂರು ವೈಲ್ಡ್ ಲೈಪ್ ವಿಭಾಗಕ್ಕೆ ಸಿಕ್ಕಿದ್ದು, ಕೊಲ್ಲೂರು ಆರ್‌ಎಫ್‌ಒ ದಯಾನಂದ, ವನ್ಯಜೀವಿ ವಿಭಾಗದ ಅಧಿಕಾರಿ ರಾಘವೇಂದ್ರ ನಾಯಕ್, ಅರಣ್ಯ ರಕ್ಷಕ ದೇವಿಪ್ರಸಾದ್, ಮಂಜುನಾಥ್ ಹಾಗೂ ಚಾಲಕ ಚಿದಂಬರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಬಂಧಿತ ವ್ಯಕ್ತಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾದೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಾಗುವಾನಿ ಮರ ಕಳವು ಮಾಡಿ ಮಾರಾಟ ಮಾಡುವ ತಂಡ ವಂಡ್ಸೆಯಲ್ಲಿ ಸಕ್ರಿಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.












