ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ವಿಜೇತ ಜನ್ಮ ದಿನೋತ್ಸವದ ಸವಿನೆನಪಿನಲ್ಲಿ ೧೮ನೇ ಕುವೆಂಪು ನಾಟಕೋತ್ಸವ ಪ್ರಪ್ರಥಮ ಬಾರಿಗೆ ಕುಂದಾಪುರದಲ್ಲಿ ಭಂಡಾರ್ಕರ್ಸ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಿ.೨೫ ರಿಂದ ರಂಗಕಹಳೆ ಬೆಂಗಳೂರು ಐದು ದಿನಗಳ ಕಾಲ ಡಾ. ಎಚ್ ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಆಯೋಜಿಸಿದೆ.
ಈ ಕುರಿತು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಟಕೋತ್ಸವ ಸಂಚಾಲಕ ಓಹಿಲೇಶ್ ಲಕ್ಷ್ಮಣ, ಮಾತನಾಡಿ, ಕರಾವಳಿ ಕರ್ನಾಟಕದ ಇತಿಹಾಸದಲ್ಲಿ ಕುವೆಂಪು ನಾಟಕೋತ್ಸವ ನಡೆಯುತ್ತಿರುವುದು ಇದು ಮೊದಲ ಬಾರಿ. ಡಿ. ೨೫ ರಿಂದ ಆರಂಭಗೊಂಡು ೫ ದಿನಗಳ ಕಾಲ ತಲಾ ಎರಡು ನಾಟಕಗಳು ಭಂಡಾರ್‌ಕರ್ಸ್ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಸಂಜೆ ೬ ರಿಂದ ಪ್ರದರ್ಶನಗೊಳ್ಳಲಿದೆ ಎಂದರು.
ಡಿ.೨೫ ರಿಂದ ೨೯ರವರೆಗೆ ನಡೆಯುಲಿರುವ ಈ ನಾಟಕೋತ್ಸವದ ಯಶಸ್ಸಿಗೆ ಕುವೆಂಪು ನಾಟಕೋತ್ಸವ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬೆಂಗಳೂರಿನ ರಣಕಹಳೆ ಸಂಸ್ಥೆ, ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಡಾ. ಎಚ್ ಶಾಂತಾರಾಮ್ ಅವರ ಅಧ್ಯಕ್ಷತೆಯಲ್ಲಿ ಪ್ರತಿಷ್ಠಿತ ತಂಡಗಳೊಂದಿಗೆ ನಾಟಕೋತ್ಸವವು ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದರು.
ಡಿ. ೨೫ ರಂದು ಸಂಜೆ ೬ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲ ಉದ್ಘಾಟಿಸಲಿದ್ದು, ಡಾ| ಎಚ್. ಶಾಂತರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ನಾಡೋಜ ಪ್ರೊ| ಹಂ.ಪಂ. ನಾಗರಾಜಯ್ಯ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಾಟಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ| ಎಚ್. ಶಾಂತರಾಂ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಟಕೋತ್ಸವದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಾ| ಎನ್. ಪಿ. ನಾರಾಯಣ ಶೆಟ್ಟಿ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಪ್ರೊ| ಸುಮಲತಾ ಉಪಸ್ಥಿತರಿದ್ದರು.