ಕುಂದಾಪುರ: ಹಾಡಹಗಲೇ ಮಾರಕಾಯುಧಗಳಿಂದ ಕೊಚ್ಚಿ ಬರ್ಬರ ಹತ್ಯೆ

ಕುಂದಾಪುರ: ಮಟಮಟ ಮಧ್ಯಾಹ್ನ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಕೊಲೆಗೈದ ದಾರುಣ ಘಟನೆ ಇಲ್ಲಿನ ಹಟ್ಟಿಯಂಗಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲ್ಕಂಬ ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಕಂಡ್ಲೂರು ಸಮೀಪದ ವಾಲ್ತೂರು ಗ್ರಾಮದ ಜೋರ್ಮಕ್ಕಿಯ ನರಸಿಂಹ ಶೆಟ್ಟಿಯವರ ಪುತ್ರ ಬಾಬು ಶೆಟ್ಟಿ (೫೫) ಕೊಲೆಯಾದ ದುರ್ದೈವಿ.

ಟೆಂಪೋ ಮಾಲಕರಾಗಿರುವ ಬಾಬು ಶೆಟ್ಟಿ ಕೃಷಿಚಟುವಟಿಕೆಗಳಿಗೆ ಗೊಬ್ಬರ ಸಾಗಾಟ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಮನೆಯ ತೋಟಗಳಿಗೆ ನೀರು ಹಾಯಿಸಿ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಜೋರ್ಮಕ್ಕಿಯ ತನ್ನ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಬೈಕ್ನಲ್ಲಿ ತೆರಳಿದ್ದ ಕೆಲವೇ ಹೊತ್ತಿನಲ್ಲಿ ಅವರ ಹತ್ಯೆ ನಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಅವರನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ. ಗೇರು ಹಾಡಿಯೊಂದರ ಬಳಿಯಲ್ಲಿ ರಕ್ತ ಸಿಕ್ತ ದೇಹ ಬಿದ್ದಿದ್ದರೇ, ಅವರ ಬೈಕ್ ಗೇರು ತೋಪಿನ ಇನ್ನೊಂದು ತುದಿಯನ್ನು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಬಿದ್ದಿದೆ. ಹತ್ಯೆಯಾದ ಬಾಬು ಶೆಟ್ಟಿಯವರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಇರಿತದ ಗುರುತುಗಳು ಪತ್ತೆಯಾಗಿದೆ.

ಬಾಬು ಶೆಟ್ಟಿಯವರ ಮೇಲೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಳ್ಳಲು ಗೇರುತೋಪಿನ ಕಾಲು ದಾರಿಯಲ್ಲಿ ಓಡಿ ಕಲ್ಕಂಬ ರಸ್ತೆಯ ಸಮೀಪ ಬಂದು ಅವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಾಬು ಶೆಟ್ಟಿಯವರ ಹೀರೋಹೊಂಡಾ ಬೈಕ್ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೈಕ್‌ನ ಸಮೀಪವೇ ಹೆಲ್ಮೆಟ್ ಹಾಗೂ ಅವರ ಒಂದು ಸ್ಲಿಪ್ಪರ್ ಪತ್ತೆಯಾಗಿದ್ದು, ಗೇರು ತೋಪಿನಲ್ಲಿ ಬಾಬು ಶೆಟ್ಟಿ ಬಳಸುತ್ತಿದ್ದ ಕನ್ನಡಕ ಹಾಗೂ ಮೊಬೈಲ್‌ಫೋನ್ ಪತ್ತೆಯಾಗಿದೆ.

ಜಾಗದ ತಕರಾರು ಕೊಲೆಯಲ್ಲಿ ಅಂತ್ಯವಾಯಿತೇ?:
ಬಾಬು ಶೆಟ್ಟಿಯವರು ಮೃದುಸ್ವಭಾವದವರಾಗಿದ್ದು, ಯಾರೊಂದಿಗೂ ವೈಷಮ್ಯ ಬೆಳೆಸಿಕೊಂಡವರಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿದ್ದ ಅವರು ತಮ್ಮ ಟೆಂಪೋದಲ್ಲೇ ಚಾಲಕನಾಗಿ ಶ್ರಮವಹಿಸಿ ದುಡಿಯುತ್ತಿದ್ದರು. ಆದರೆ ತಮ್ಮ ಸಹೋದರಿಗೆ ಸಂಬಂಧಿಸಿದ ಜಾಗದ ವಿವಾದವೊಂದರಲ್ಲಿ ಗಲಾಟೆ ನಡೆದಿದ್ದು, ಕೆಲವೊಬ್ಬರೊಂದಿಗೆ ವೈಷಮ್ಯವೂ ಇತ್ತು ಎನ್ನಲಾಗಿದೆ. ಮೇಲ್ನೋಟಕ್ಕೆ ಅವರ ಹತ್ಯೆಗೆ ಜಾಗದ ತಕರಾರು ಕಾರಣವಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಒಳಚಡ್ಡಿಯಲ್ಲಿ ಮೃತದೇಹ ಪತ್ತೆ!:
ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ತಪ್ಪಿಸಿಕೊಂಡು ಓಡಿಬಂದು ಕಲ್ಕಂಬ ರಸ್ತೆಯಲ್ಲಿ ರಕ್ತದಮಡುವಿನಲ್ಲಿ ಭಾಬು ಶೆಟ್ಟಿಯವರ ಮೃತದೇಹ ಪತ್ತೆಯಾಗಿದೆ. ಬಿಳಿಬಣ್ಣದ ಶರ್ಟ್ ಧರಿಸಿದ್ದು, ಒಳಚಡ್ಡಿ ಉಡುಪಿನಲ್ಲಿ ರಸ್ತೆ ಬದಿಯಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಅವರು ಉರುಳಾಡಿಕೊಂಡಿರುವ ಕುರುಹುಗಳು ಲಭಿಸಿದ್ದು, ಓಡೋಡಿ ಬಂದ ದಾರಿಯೂದ್ದಕ್ಕೂ ರಕ್ತದ ಕಲೆಗಳು ಕಂಡುಬಂದಿದೆ. ಯಾವತ್ತೂ ಬಾಬು ಶೆಟ್ಟಿಯವರು ಪಂಚೆಯನ್ನು ಧರಿಸುತ್ತಿದ್ದರು. ಮೃತದೇಹ ಸಿಕ್ಕ ಸ್ಥಳದಲ್ಲಿ ಅವರು ಬಳಸುತ್ತಿದ್ದ ಕನ್ನಡಕ, ಮೊಬೈಲ್ ಎಲ್ಲವೂ ಸಿಕ್ಕರೂ ಪಂಚೆ ಸಿಗದಿರುವುದು ಪೊಲೀಸರನ್ನು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಬೇರೆ ಬೇರೆ ಆಯಾಮದಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿವಾಹಿತರಾಗಿರುವ ಬಾಬು ಶೆಟ್ಟಿಯವರಿಗೆ ಪತ್ನಿ, ಓರ್ವ ಗಂಡು ಹಾಗೂ ಓರ್ವ ಪುತ್ರಿ ಇದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೊಲೆಯಾದ ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಎಸ್.ಪಿ ನಿಶಾ ಜೇಮ್ಸ್, ಕುಂದಾಪುರ ಎಎಸ್ಪಿ ಹರಿರಾಂ ಶಂಕರ, ಸರ್ಕಲ್‌ಇನ್ಸ್‌ಪೆಕ್ಟರ್ ಡಿ.ಆರ್.ಮಂಜಪ್ಪ, ಕುಂದಾಪುರ ಗ್ರಾಮಾಂತರ ಠಾಣೆಯ ಎಸ್.ಐ ರಾಜಕುಮಾರ ಭೇಟಿ ನೀಡಿದ್ದಾರೆ.