ಕುಂದಾಪುರ : ಜರ್ಮನಿಯ ಮ್ಯೂನಿಚ್‌ನಲ್ಲಿ ನೆಲೆಸಿರುವ ಉಡುಪಿ ಜಿಲ್ಲೆ ಕುಂದಾಪುರ ಮೂಲದ ಬಿ.ವಿ.ಪ್ರಶಾಂತ (51) ಹಾಗೂ ಸ್ಮೀತಾ (40) ದಂಪತಿಗಳ ಮೇಲೆ ಮಾ.29ರಂದು ಆಗಂತುಕನೊಬ್ಬ ಚೂರಿಯಿಂದ ಇರಿದ ಪರಿಣಾಮ ಪ್ರಶಾಂತ ಮೃತಪಟ್ಟು ಪತ್ನಿ ಸ್ಮೀತಾ ಗಂಭೀರವಾಗಿ ಗಾಯಗೊಂಡಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಪ್ರಶಾಂತ ಅವರ ತಂದೆ ದಿ.ಬಿ.ಎನ್.ವೆಂಕಟರಮಣ ಹಾಗೂ ತಾಯಿ ವಿನಯ ಮೂಲತ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ವ್ಯವಹಾರ ಹಾಗೂ ಕೃಷಿ ಕಾರ್ಯಗಳಿಗಾಗಿ ಅವರು ಕುಟುಂಬ ಸಹಿತರಾಗಿ ಸಾಗರದಲ್ಲಿ ನೆಲೆಸಿದ್ದರು. ವೆಂಕಟರಮಣ ಅವರ ಪೂರ್ವಿಕರು ಕುಂದಾಪುರ ಸಮೀಪದ ಬಸ್ರೂರಿನವರಾಗಿದ್ದರಿಂದ ಕುಟುಂಬ ಸದಸ್ಯರ ಹೆಸರಿನೊಂದಿಗೆ ಬಸ್ರೂರು ಉಳಿದುಕೊಂಡಿದೆ. ಸ್ಮಿತಾ ಅವರ ತಂದೆ ಡಾ. ಚಂದ್ರಮೌಳಿ ಕುಂದಾಪುರದ ಸಿದ್ದಾಪುರದಲ್ಲಿದ್ದು ಆಯುರ್ವೇದಿಕ್ ವೈದ್ಯರಾಗಿದ್ದಾರೆ.
ಪ್ರಶಾಂತ ಅವರು ಡಿಪ್ಲೊಮಾ ಇಂಜಿನಿಯರಿಂಗ್ ವ್ಯಾಸಂಗದ ಬಳಿಕ ಹಲವು ವರ್ಷಗಳಿಂದ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪತ್ನಿ ಸ್ಮೀತಾ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎಂಎ ಪದವಿ ಪಡೆದಿದ್ದು ಜರ್ಮನಿಯಲ್ಲಿ ಪತಿ ಹಾಗೂ ಪುತ್ರಿ ಸಾಕ್ಷೀ (15) ಪುತ್ರ ಶ್ಲೋಕ್ (10) ಜೊತೆಯಿದ್ದಾರೆ.
ಶುಕ್ರವಾರ ಜರ್ಮನಿಯಲ್ಲಿ ನಡೆದಿರುವ ದುರ್ಘಟನೆ ಕುರಿತು ಅವರ ಕುಟುಂಬ ಸದಸ್ಯರಿಗೆ ಸಮರ್ಪಕವಾದ ಮಾಹಿತಿಯಿಲ್ಲ. ಅಲ್ಲಿನವರು ಶುಕ್ರವಾರ ತಡರಾತ್ರಿ ಸಿದ್ದಾಪುರದ ಸ್ಮಿತಾ ಕುಟುಂಬಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಜರ್ಮನ್ ನಲ್ಲಿ ತಮ್ಮ ಮನೆಯಿಂದ ಇಳಿದು ಬರುತ್ತಿದ್ದಾಗ ಆಗಂತುಕ ವ್ಯಕ್ತಿಯೊಬ್ಬನಿಂದ ಚೂರಿ ಇರಿದಿದ್ದು ಪ್ರಶಾಂತ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸ್ಮೀತಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರನ್ನು ತೀವ್ರಾ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿರುವುದಾಗಿ ಪ್ರಶಾಂತ ಅವರ ಸಹೋದರಿ ಸಾಧನ ಅವರ ಪತಿ ಶ್ರೀನಿವಾಸ ತಿಳಿಸಿದ್ದಾರೆ.
ವಿದೇಶಕ್ಕೆ ತೆರಳಲಿರುವ ಕುಟುಂಬ ಸದಸ್ಯರು:
ಈ ದುರ್ಘಟನೆ ಮಾಹಿತಿ ಬಂದ ಬಳಿಕ ಸ್ಮಿತಾ ಹಾಗೂ ಪ್ರಶಾಂತ್ ಇರ್ವರ ಕುಟುಂಬಗಳಲ್ಲಿ ದಿಗ್ಬ್ರಮೆ ಆವರಿಸಿದೆ. ಮುಂದೇನು ಮಾಡಬೇಕು ಎನ್ನುವುದಕ್ಕಾಗಿ ಕುಟುಂಬ ಸದಸ್ಯರು ತಮ್ಮ ಆಪ್ತರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುತ್ತಿದ್ದಾರೆ. ಜರ್ಮನ್ ದೇಶದ ಕಾನೂನು ಕಟ್ಟಳೆಗಳ ಅನುಸಾರವಾಗಿ ತೀರ್ಮಾನ ಕೈಗೊಳ್ಳಬೇಕಾಗಿರುವುದರಿಂದ ರಾಯಭಾರ ಕಚೇರಿಯಿಂದ ಬರುವ ಸಂದೇಶಗಳನ್ನು ಸ್ಮಿತಾ ಸಹೋದರ ಸುಜಯ್ ಹಾಗೂ ಕುಟುಂಬಿಕರು ಪಾಲಿಸುತ್ತಿದ್ದಾರೆ. ಈಗಾಗಾಲೇ ಉಡುಪಿ ಎಸ್ಪಿ ನಿಶಾ ಜೇಮ್ಸ್ ಸಹ ಕುಟುಂಬಸ್ಥರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ.