“ಆಳುವ ಶಕ್ತಿಗಳು ಮಹಿಳೆಯರ ಮೇಲೆ ಮೌಡ್ಯತೆ ತುಂಬುತ್ತಿದೆ”

ಕುಂದಾಪುರ: ಮಹಿಳೆಯರಲ್ಲಿ ಮೌಡ್ಯತೆ ತುಂಬಿ ಶಬರಿಮಲೆ ಪ್ರವೇಶ ಅಪರಾಧವೆಂಬ ಭಾವನೆ ಮೂಡಿಸಿ ರಾಜಕೀಯ ಲಾಭ ಪಡೆಯಲು ಆಳುವ ಶಕ್ತಿಗಳೇ ಮುಂದಾಗುತ್ತಿರುವುದು ವಿಷಾದನೀಯ ಎಂದು ರಾಜ್ಯ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ವಿ.ಗೀತಾ ತಿಳಿಸಿದ್ದಾರೆ.

 ಇಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಜನವಾದಿ ಮಹಿಳಾ ಸಂಘಟನೆಯ ಮೊದಲ ಸಮ್ಮೇಳನದಲ್ಲಿ ಅವರು ಮಾತನಾಡಿದರು.

 ರೈತರ ಸಾಲ ಮನ್ನಾ ವಿಚಾರ ಮಾತನಾಡುತ್ತಿರುವ ರಾಜಕೀಯ ಪಕ್ಷಗಳು, ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸ್ತ್ರೀ ಶಕ್ತಿ ಸಂಘಗಳ ಮೂಲಕ ಶೇ.೪ ರ ಬಡ್ಡಿ ದರದಲ್ಲಿ ಸಾಲ ಕೊಡುವ ಪ್ರಸ್ತಾಪ ಕೈ ಬಿಟ್ಟಿರುವುದು ಖಂಡನೀಯ. ಮಹಿಳೆಯರು ಕುಟುಂಬ ನಿರ್ವಹಿಸಲು ಸಾಧ್ಯವಂತಾಗಲು ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ವಿಶಾಖ ತೀರ್ಪು ಜಾರಿಗೆ ಸರ್ಕಾರ ಮುಂದಾಗಬೇಕು ಎಂದವರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಜನವಾದಿ ಮಹಿಳಾ ಸಂಘಟನೆಯ ನೂತನ ಅಧ್ಯಕ್ಷರಾಗಿ ಆರತಿ ಲಾಲು ಪ್ರಸನ್ನ, ಕಾರ್ಯದರ್ಶಿಯಾಗಿ ಶೀಲಾವತಿ ಹಾಗೂ ಕೋಶಾಧಿಕಾರಿಯಾಗಿ ಲಲಿತಾ ಎಸ್‌ಅವರನ್ನು ಆಯ್ಕೆ  ಮಾಡಲಾಯಿತು. ಲಲಿತಾ ಎಸ್‌ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಬಲ್ಕೀಸ್‌ಬಾನು ಲೆಕ್ಕಪತ್ರ ಮಂಡಿಸಿದರು. ಕಾರ್ಮಿಕ ಸಂಘಟನೆಯ ಪ್ರಮುಖರಾದ ಪದ್ಮಾವತಿ ಶೆಟ್ಟಿ, ಮಹಾಬಲ ವಡೇರಹೋಬಳಿ, ಬಾಲಕೃಷ್ಣ ಶೆಟ್ಟಿ, ಎಚ್.ನರಸಿಂಹ ಹಾಗೂ ಸುರೇಶ್ ಕಲ್ಲಾಗಾರ್ ಉಪಸ್ಥಿತರಿದ್ದರು.