ಕುಂದಾಪುರ: ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಕುಂದಾಪುರದ ಗಾಂಧಿ ಮೈದಾನದಲ್ಲಿ ಸಂಭ್ರಮ ಸಡಗರದಿಂದ ೬೪ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ಸಹಾಯಕ ಆಯುಕ್ತ ರಾಜು ಕೆ ಅವರು ಸ್ವಾತಂತ್ರ್ಯಪೂರ್ವದಿಂದಲೇ ಭಾಷಾವಾರು ಪ್ರಾಂತ್ಯ ರಚನೆಗೆ ಆಗ್ರಹಿಸಿ ಹೋರಾಟ ನಡೆಯುಯತ್ತಲೇ ಇತ್ತು. ಬ್ರಿಟೀಷರ ಆಡಳಿತಕ್ಕೊಳಪಟ್ಟಿದ್ದ ಮುಂಬೈ, ಮದ್ರಾಸ್ ಪ್ರಾಂತ್ಯ, ರಾಜಮನೆತನದ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಕೊಡಗು ಪ್ರಾಂತ್ಯಗಳನ್ನೊಳಗೊಂಡು ಏಕೀಕೃತ ಮೈಸೂರು ರಾಜ್ಯ ೧೯೫೬ರಲ್ಲಿ ಉದಯವಾಯಿತು. ೧೯೭೩ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ದೇಶದ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಾಜ್ಯದ ಕೊಡುಗೆ ಅಪಾರ ಎಂದರು
ಮೊಳಗಿದ ಕುಂದ್ರಾಪ್ರ ಕನ್ನಡ:
`ಬರೀ ಕನ್ನಡ ಭಾಷಿ ಅಂದ್ರೆ ಸಾಲ. ಅದನ್ನ ಆಡಿ ಬಳ್ಸಿ, ಕಲ್ಸಿ, ಬೆಳ್ಸಕ್. ಆಗ ಮಾತ್ರ ನಮ್ಮ ಭಾಷಿ, ನಮ್ಮ ಹೆಮ್ಮೆ, ನಮ್ಮ ನಾಡು, ನಮ್ಮ ಗರಿಮೆ ಆತ್. ಕನ್ನಡ ಭಾಷಿ ಒಂದ್ ದಿನಕ್ ಮಾತ್ರ ಸೀಮಿತ ಆಪ್ಕ್ ಆಗ. ನಾವು ಮಾಡೋ ವೈವಾಟಿನಲ್ಲೂ ಇರ್‍ಕ್. ತಾಯಿ, ತಾಯ್ನಾಡ್, ತಾಯಿ ಭಾಷಿನ ಯಾವತ್ತೂ ಮರುಕ್ ಆಗ. ಅದನ್ನು ಮರೆವುದು ಒಂದೇ, ಉಂಡ್ ಕೂಳು ಮರೆವುದು ಒಂದೇ ಎಂದು ಸಹಾಯಕ ಆಯುಕ್ತ ರಾಜು ಕೆ. ಕುಂದಾಪುರ ಕನ್ನಡ ಮಾತಿನೊಂದಿಗೆ ತಮ್ಮ ಭಾಷಣವನ್ನು ಕೊನೆಗೊಳಿಸಿರುವುದು ನೆರೆದ ಸಾರ್ವಜನಿಕರ, ವಿದ್ಯಾರ್ಥಿಗಳ ಗಮನ ಸೆಳೆದರು.
ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಎಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಯುವಜನಾ ಸೇವಾ ಅಧಿಕಾರಿ ಕುಸುಮಾಕರ ಶೆಟ್ಟಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆಯ ಸದಸ್ಯರಾದ ದೇವಕಿ ಸಣ್ಣಯ್ಯ, ವಿ. ಪ್ರಭಾಕರ್, ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ, ಮಾಜಿನ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮತ್ತಿತರರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಸೈ ಹರೀಶ್ ಆರ್.ನಾಯ್ಕ್ ನೇತೃತ್ವದಲ್ಲಿ ಪೊಲೀಸ್, ಹೋಮ್ ಗಾರ್ಡ್, ವಿವಿಧ ಶಾಲೆಯ ಎನ್‌ಸಿಸಿ, ಸೇವಾದಳ, ಸ್ಕೌಟ್ ಎಂಡ್ ಗೈಡ್ಸ್, ಹೋಲಿ ರೋಜರಿ ವಿದ್ಯಾರ್ಥಿಗಳ ಬ್ಯಾಂಡ್‌ಸಟ್ ವಾದ್ಯದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಹೋಲಿ ರೋಜರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.