ಉಡುಪಿ: ಕುಂದಾಪುರ ಕನ್ನಡ ಉದ್ಯಮದ ಭಾಷೆಯಲ್ಲ. ಇದು ಬದುಕಿನ ಭಾಷೆಯಾಗಿದೆ. ಹೀಗಾಗಿ ಈ ಭಾಷೆ ಇಂದಿಗೂ ಜೀವಂತವಾಗಿದೆ. ಕುಂದಾಪುರ ಕನ್ನಡ ಭಾಷೆಯ ಬೆಳವಣಿಗೆಗೆ ಅಕಾಡೆಮಿಯ ಅಗತ್ಯವಿಲ್ಲ. ಇದು ಜನಮಾನಸದಲ್ಲಿ ಬೆರೆತಿರುವ ಸಮೃದ್ಧ ಭಾಷೆಯಾಗಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಆಯೋಜಿಸಿದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡದ ಕಂಪನ್ನು ಪಸರಿಸುವ ಕುಂದಾಪುರ ಕನ್ನಡ ಮಾತನಾಡುವಾಗ ಗತ್ತು ಬಿಡಬೇಕು. ಒಂದು ಕಾಲದಲ್ಲಿ ಕನ್ನಡದ ಸಾಮ್ರಾಜ್ಯವೇ ಕುಂದಾಪುರದಲ್ಲಿತ್ತು. ಆದರೆ ಪ್ರಸ್ತುತ ಕುಂದಾಪುರ ಕನ್ನಡದ ಮೇಲೆ ಇತರೆ ಭಾಷೆಗಳ ಪ್ರಭಾವ ಬೀರಿದ್ದು, ಇದರಿಂದ ಭಾಷೆಯ ನೈಜತೆಗೆ ಸ್ವಲ್ಪ ಪೆಟ್ಟು ಬಿದ್ದಿದೆ ಎಂದರು.
ಕನ್ನಡ ಭಾಷೆಗೆ ಕುಂದಾಪುರದವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಯ ಕೆಲವೊಂದು ಶಬ್ಧಾರ್ಥಗಳಿಗೆ ಕುಂದಾಪುರ ಕನ್ನಡವೇ ಮೂಲವಾಗಿದೆ. ಭಾಷೆ ಯಾವ ರೀತಿ ಕಟ್ಟಿ ಹಾಕುತ್ತದೆ ಎಂಬುವುದಕ್ಕೆ ಕುಂದಾಪುರ ಕನ್ನಡ ಉತ್ತಮ ನಿರ್ದೇಶನ. ಈ ಭಾಷೆಯನ್ನು ಮುಂದಿನ ಪೀಳಿಗೆಗೆ ಕಲಿಸುವ ಮೂಲಕ ಇದನ್ನು ಉಳಿಸಿಬೆಳೆಸಿಕೊಂಡು ಹೋಗಲು ಸಾಧ್ಯವಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಮಾತನಾಡಿ, ಭಾಷೆ ಎನ್ನುವುದು ಆಯಾ ಪ್ರದೇಶಕ್ಕೆ ಸಂಬಂಧಿಸಿದ್ದು, ಅದನ್ನು ಆ ಭಾಷೆಯ ಎಲ್ಲ ಶಬ್ದಗಳಲ್ಲಿ ಕಾಣಬಹುದಾಗಿದೆ. ಮಾತೃಭಾಷೆಯಿಂದ ಸ್ವಲ್ಪ ದಿನ ದೂರ ಇದ್ದಾಗ ಅದರ ಮಹತ್ವ ತಿಳಿಯುತ್ತದೆ. ಹಾಗಾಗಿ ಯಾರು ಮಾತೃಭಾಷೆಯನ್ನು ಮರೆಯಬಾರದು ಎಂದು ಕರೆನೀಡಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಮಂಜುನಾಥ್ ಕಾಮತ್ ಹಾಗೂ ಸುಚೇತ್ ಕೋಟ್ಯಾನ್ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಲಕ್ಷ್ಮೀನಾರಾಯಣ ಕಾರಂತ ಪ್ರಾಸ್ತಾವನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ ಕುಮಾರ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ನವ್ಯಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೈಭವ್ ಆರ್. ಭಂಡಾರಿ ವಂದಿಸಿದರು.