ಅಂಬೇಡ್ಕರ್ ಕೊಟ್ಟ ಸಂವಿಧಾನ ಒಪ್ಪದಿದ್ದರೆ ದೇಶ ಬಿಟ್ಟು ತೊಲಗಿ: ಜಯನ್ ಮಲ್ಪೆ ಆಕ್ರೋಶ

ಕುಂದಾಪುರ: ಬಹಳ ಹಿಂದಿನಿಂದಲೂ ಆರೆಸ್ಸೆಸ್ ಈ ದೇಶಕ್ಕೆ ಸಂವಿಧಾನ ನೀಡಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಇತಿಹಾಸದ ಪುಟಗಳಲ್ಲಿ ಅಂಬೇಡ್ಕರ್ ಅವರ ಹೆಸರನ್ನು ನಾಶ ಮಾಡಿದರೆ ಮಾತ್ರ ತಾವು ಬದುಕಬಹುದೆಂಬ ತಂತ್ರ ಮನುವಾದಿಗಳಲ್ಲಿದೆ. ಆದರೆ ಈ ನೆಲದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಯಾರು ಒಪ್ಪುವುದಿಲ್ಲವೋ ಅವರು ಕೂಡಲೇ ಈ ದೇಶ ಬಿಟ್ಟು ತೊಲಗಲಿ ಎಂದು ದಲಿತ ಮುಖಂಡ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿದ ರಾಜ್ಯ ಸರ್ಕಾರದ ವಿರುದ್ದ ಶುಕ್ರವಾರ ತಾಲೂಕು ಪಂಚಾಯತ್ ಎದುರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬೀದಿಯಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದಲೇ. ಮನೆಮೆನಗೆ ಪೇಪರ್ ಹಾಕಿ ಬದುಕುತ್ತಿದ್ದವರು ಅಂಬೇಡ್ಕರ್ ನೀಡಿರುವ ಸಂವಿಧಾನಡಿಯಲ್ಲೇ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. ಬುದ್ದ ಮತ್ತು ಅಶೋಕನ ನೆಲೆಗಟ್ಟಿನಲ್ಲಿ ಸಮಾನತೆ, ಸಹೋದರತೆಯ ಆಶಯದಲ್ಲಿ ಈ ದೇಶಕ್ಕೆ ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದಾರೆ. ಇದೇ ಸಂವಿಧಾನ ನಮಗೆಲ್ಲರಿಗೂ ಇಂದು ಬದುಕಾಗಿದೆ ಎಂದರು.

ಅಂಬೇಡ್ಕರ್ ಹೆಸರನ್ನು ನಾಶಪಡಿಸುವ ಬಿಜೆಪಿಯ ಷಡ್ಯಂತ್ರ ಇಂದು ನಿನ್ನೆಯದಲ್ಲ. ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ನಾಶ ಮಾಡಿದರೆ ಶೋಚಿತ ಸಮಾಜದ ಧ್ವನಿಯನ್ನು ಕುಗ್ಗಿಸಬಹುದು ಎಂಬ ಲೆಕ್ಕಚಾರ ಸಂಘಪರಿವಾರ ಮತ್ತು ಬಿಜೆಪಿಯದ್ದಾಗಿದೆ. ಮನುವಾದಿಗಳ ಇಂತಹ ಹೀನ ಕುತಂತ್ರಗಳನ್ನು ನಾಶ ಮಾಡಿಲ್ಲವೆಂದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ. ಮನುವಾದಿಗಳ ವಿರುದ್ದ ನಾವೆಲ್ಲರೂ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತೇವೆ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವನ್ನು ನಾಶಗೊಳಿಸುವ ಕುತಂತ್ರಕ್ಕೆ ನಾವೆಲ್ಲರೂ ಪ್ರತಿರೋಧ ಒಡ್ಡುತ್ತೇವೆ ಎಂದು ಜಯನ್ ಮಲ್ಪೆ ಹೇಳಿದರು.

ಆದರ್ಶವನ್ನು ಭೋದಿಸುವ ಶಿಕ್ಷಣ ಸಂಸ್ಥೆ ಇಂದು ಇಂತಹ ನೀಚ ಸಂದೇಶವನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದೆ. ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರವನ್ನು ರಾಷ್ಟ್ರಪತಿ ವಜಾಗೊಳಿಸಬೇಕಿತ್ತು. ಆದರೆ ಆ ಕೆಲಸಕ್ಕೆ ಮುಂದಾಗಿರುವುದು ಬಹುದೊಡ್ಡ ದುರಂತ ಎಂದು ಅವರು ಹೇಳಿದರು.

ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ, ಈ ದೇಶದಲ್ಲಿರುವ ೧೩೦ಕೋಟಿ ಜನರಿಗೂ ಇರುವ ಏಕೈಕ ಪವಿತ್ರ ಗ್ರಂಥ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನ. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಒಪ್ಪಲಿಕ್ಕೆ ಈ ಮನುವಾದಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಂತ ಹಂತವಾಗಿ ಸಂವಿಧಾನವನ್ನು ತಿರುಚುವ ಮೂಲಕ ಅಂಬೇಡ್ಕರ್ ಹೆಸರನ್ನು ನಾಶ ಮಾಡುವ ಹೀನ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ ಎಂದರು.

ಶಿಕ್ಷಣ ಸಚಿವರಿಗೆ ಸವಾಲು:
ತಾಕತ್ತಿದ್ದರೆ ಇನ್ನುಮುಂದೆ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಯಾವುದೇ ಸಭೆಗಳಲ್ಲಿ, ಚುನಾವಣಾ ಪ್ರಚಾರಗಳಲ್ಲಿ ಬಳಸಬೇಡಿ ಎಂದು ಬಿಜೆಪಿಯ ಎಲ್ಲಾ ಘಟಕಗಳಿಗೆ ಬಿಜೆಪಿ ಸರ್ಕಾರ ಸುತ್ತೋಲೆ ಹೊರಡಿಸಲಿ. ಆಮೇಲೆ ಅದರ ಪರಿಣಾಮ ಏನೆನ್ನುವುದು ಅರಿವಾಗುತ್ತದೆ ಎಂದು ಉಮಾಶಂಕರ್ ಮೂಲಕ ಶಿಕ್ಷಣ ಇಲಾಖೆಗೆ ಸುತ್ತೋಲೆ ಕಳುಹಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಚಿಂತಕ ಶಶಿಧರ ಹೆಮ್ಮಾಡಿ ನೇರ ಸವಾಲು ಹಾಕಿದರು. ಮನಸ್ಸು, ಹೃದಯದಲ್ಲಿ ಗೋಡ್ಸೆಯನ್ನು ತುಂಬಿಕೊಂಡವರು ಅಂಬೇಡ್ಕರ್ ಅವರನ್ನು ಚುನಾವಣಾ ಪ್ರಚಾರಗಳಿಗೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದೂ ಅವರು ಹೇಳಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸಿ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ನಕಲನ್ನು ಸುಟ್ಟು ದಲಿತ ಮುಖಂಡ ಜಯನ್ ಮಲ್ಪೆ ರಾಜ್ಯ ಸರ್ಕಾರದ, ಶಿಕ್ಷಣ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು ಮಾತನಾಡಿದರು. ಶ್ರೀಧರ್ ಪಿಎಸ್, ಶಾಜಿ ಅಬ್ರಹಾಂ, ನ್ಯಾಯವಾದಿ ಇಲಿಯಾಸ್, ದಸಂಸ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಮುಖಂಡರಾದ ಹರೀಶ್ ಮಲ್ಪೆ, ಸುಂದರ ಕಪ್ಪೆಟ್ಟು, ಗಣೇಶ್ ನೇರ್ಗಿ, ಪ್ರದೀಪ್ ಗಿಳಿಯಾರು, ರಾಘವೇಂದ್ರ, ಕುಮಾರ್ ಕೋಟ, ರವಿ ಸುಣ್ಣಾರಿ, ಗೀತಾ, ವಾಸು ನೇಜಾರು, ಸುರೇಶ್ ಬಾರ್ಕೂರು ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು.