ಕುಂದಾಪುರ: ಜನರಿಗೆ ಮತ್ತೆ ಕರ್ಫ್ಯೂ ಭೀತಿ: ಅಗತ್ಯ ವಸ್ತು ಕೊಂಡುಕೊಳ್ಳಲು ಮುಗಿಬಿದ್ದ ಜನತೆ

ಕುಂದಾಪುರ: ಯಾವ ಕ್ಷಣದಲ್ಲಾದರೂ ಜಿಲ್ಲಾಡಳಿತ ಕರ್ಫ್ಯೂ ಆದೇಶ ಹೊರಡಿಸಬಹುದೆಂಬ ಭೀತಿಯಿಂದಾಗಿ ಸಾರ್ವಜನಿಕರು ಅಗತ್ಯವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬೀಳುತ್ತಿರುವ ದೃಶ್ಯ ಕುಂದಾಪುರ ನಗರದಲ್ಲಿ ಸೋಮವಾರ ಸಂಜೆ ಕಂಡುಬಂದಿದೆ.

ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಜನತಾ ಕರ್ಫ್ಯೂಗೆ ಜೈ ಎಂದ ತಾಲೂಕಿನ ಜನತೆ ಇದೀಗ ಮತ್ತೆ ಕರ್ಫ್ಯೂ ವಿಧಿಸಬಹುದು ಎಂದು ಮುನ್ನೆಚ್ಚರಿಕೆಯಿಂದ ದಿನಸಿ ಸಾಮಾಗ್ರಿ, ತರಕಾರಿ, ಮೀನು ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮನೆಯಿಂದ ಸೋಮವಾರ ಸಂಜೆ ನಗರಕ್ಕೆ ಆಗಮಿಸಿದರು.

ಮಧ್ಯಾಹ್ನದ ತನಕವೂ ಜನಸಂಚಾರ ವಿರಳ:
ಭಾನುವಾರ ನಡೆದ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ ಇಡೀ ದಿನ ಮನೆಯಲ್ಲೇ ಉಳಿದುಕೊಂಡ ಸಾರ್ವಜನಿಕರು ಸೋಮವಾರ ಮತ್ತೆ ರಸ್ತೆಗಿಳಿದರು. ಕೆಎಸ್‌ಆರ್‌ಟಿಸಿ ಹಾಗೂ ಬಹುತೇಕ ಖಾಸಗಿ ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕವೂ ಜನಸಂಚಾರ ಸಾಕಷ್ಟು ವಿರಳವಾಗಿತ್ತು. ಹೊಟೇಲ್‌ಗಳನ್ನ ಮುಚ್ಚಲಾಗಿದ್ದು, ಕೇವಲ ಪಾರ್ಸೆಲ್‌ಗಳನ್ನು ಮಾಡು ಕೊಡುವ ವ್ಯವಸ್ಥೆ ಮಾಡಲಾಯಿತು.

ಎಲ್ಲೆಲ್ಲೂ ಕ್ಯೂ!:
ಇಡೀ ಕರ್ನಾಟಕ ಲಾಕ್‌ಡೌನ್ ಆಗುವ ಸಾಧ್ಯತೆ ಇದೆ ಎಂಬ ಸುದ್ದಿಗಳಿಂದಾಗಿ ಭಯಭೀತರಾದ ಜನತೆ ಮತ್ತೆ ಜನತಾ ಕರ್ಫ್ಯೂ ವಿಧಿಸುವ ಸಾಧ್ಯತೆ ಇದೆ ಎಂದು ಕರ್ಫ್ಯೂ ಪೂರ್ವತಯಾರಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ಮನೆಯಿಂದ ನಗರಕ್ಕೆ ಕಿತ್ತೆದ್ದು ಬಂದಿದ್ದರಿಂದ ಕೆಲಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಸಾರ್ವಜನಿಕರು ಎಟಿಎಂ, ತರಕಾರಿ ಅಂಗಡಿ, ಮೀನುಪೇಟೆ, ಮಟನ್ ಸ್ಟಾಲ್, ಮದ್ಯದಂಗಡಿ ಸೇರಿದಂತೆ ಇನ್ನಿತರ ಗೃಹಬಳಕೆ ವಸ್ತುಗಳ ಅಂಗಡಿಯಲ್ಲಿ ಕ್ಯೂ ನಿಂತ ದೃಶ್ಯಗಳು ಸಾಮಾನ್ಯವಾಗಿದ್ದವು.

ಸಬ್ ರಿಜಿಸ್ಟಾರ್ ಕಚೇರಿ ಫುಲ್:
ಅಗತ್ಯ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬನ್ನಿ ಎಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಸಾರ್ವಜನಿಕರು ಪಾಲಿಸಿದ್ದರಿಂದಾಗಿ ನ್ಯಾಯಾಲಯ, ಮಿನಿವಿಧಾನಸೌಧ, ಪೊಲಿಸ್ ಠಾಣೆಗಳಲ್ಲಿ ಜನರಿಲ್ಲದೇ ಬಿಕೋ ಎನ್ನುವಂತಿತ್ತು. ಆದರೆ ಕುಂದಾಪುರ ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿರುವುದು ಕಂಡುಬಂತು.

ಮದ್ಯದಂಗಡಿಯಲ್ಲಿ ಹೌಸ್ ಫುಲ್: ವೈರಲ್
ಭಾನುವಾರ ಜನತಾ ಕರ್ಫ್ಯೂ ಇರುವ ಹಿನ್ನೆಲೆ ಎಲ್ಲಾ ಬಾರ್&ರೇಸ್ಟೋರೆಂಟ್, ವೈನ್ಸ್ ಶಾಪ್, ಎಮ್‌ಆರ್‌ಪಿ ಶಾಪ್‌ಗಳು ಬಂದ್ ಆಗಿತ್ತು. ಆದರೆ ಸೋಮವಾರ ವೈನ್ಸ್ ಹಾಗೂ ಎಮ್‌ಆರ್‌ಪಿ ಅಂಡಿಂಗಳು ತೆರೆದಿದ್ದರಿಂದ ಮತ್ತೆ ಬಂದಾಗಬಹುದೆಂಬ ಮುನ್ನೆಚ್ಚರಿಯಿಂದಾಗಿ ಮದ್ಯಪ್ರೀಯರು ಮದ್ಯಕ್ಕಾಗಿ ಸಾಲು ನಿಂತಿರುವ ದೃಶ್ಯಗಳು ಕಂಡುಬಂದಿತು. ಈ ರೀತಿಯ ಅನೇಕ ದೃಶ್ಯಗಳನ್ನು ಸೆರೆ ಹಿಡಿದ ಕೆಲವರು ಆ ಚಿತ್ರಗಳನ್ನು ಸೋಶೀಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದರಿಂದಾಗಿ ಚಿತ್ರಗಳು ಸಾಕಷ್ಟು ವೈರಲ್ ಆಯಿತು.

ಹಳ್ಳಿಗಳಲ್ಲೂ ವ್ಯಾಪಾರ ಜೋರು:
ಗ್ರಾಮೀಣ ಭಾಗದಲ್ಲೂ ಸಂಜೆಯಾಗುತ್ತಲೇ ದಿನಸಿ ಅಂಗಡಿ ಹಾಗೂ ಮೀನು ಪೇಟೆಗಳಲ್ಲಿ ವ್ಯಾಪಾರ ಜೋರಾಗಿತ್ತು. ಕಳೆದೊಂದು ವಾರಗಳಿಂದ ಕುಂಟುತ್ತಾ ಸಾಗಿದ ವ್ಯಾಪಾರ ಇಂದು ಸ್ವಲ್ಪ ಚುರುಕು ಪಡೆದುಕೊಂಡಿದ್ದು, ವ್ಯಾಪಾರಸ್ಥರು ಸ್ವಲ್ಪಮಟ್ಟಿನ ನಿಟ್ಟುಸಿರು ಬಿಡುವಂತಾಯಿತು.