ಕುಂದಾಪುರ: ಹೈವೇ ಪ್ಯಾಟ್ರೋಲ್ ತಪಾಸಣೆ ವೇಳೆ ಸವಾರ ಬಿದ್ದು ಗಾಯ:ಪೊಲೀಸರ ವಿರುದ್ದ ತಿರುಗಿಬಿದ್ದ ಸಾರ್ವಜನಿಕರು

ಕುಂದಾಪುರ: ಹೈವೇ ಪ್ಯಾಟ್ರೋಲ್ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರ ಬಿದ್ದು ಗಾಯಗೊಂಡ ಘಟನೆ ತೆಕ್ಕಟ್ಟೆ ರಾಘವೇಂದ್ರಸ್ವಾಮಿ ಮಠದ ಸ್ವಾಗತ ಗೋಪುರ ಬಳಿ ನಡೆದಿದೆ.

ಘಟನೆಗೆ ಪೊಲೀಸರ ಅಜಾಗರೂಕತೆ ವರ್ತನೆಯೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಬೈಕ್ ಸವಾರ ಗೋಪಾಡಿ ನಿವಾಸಿ ಉಲ್ಲಾಸ್(27) ಗಾಯಾಗೊಂಡಿದ್ದು ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೈವೇ ಪ್ಯಾಟ್ರೋಲ್‌ನಲ್ಲಿ ಸಿಬ್ಬಂದಿಗಳೊಡನೆ ಎಎಸ್‌ಐ ಪ್ರಭಾಕರ್ ವಾಹನ ತಪಾಸಣೆ ಮಾಡುವಾಗ ಬೈಕ್ ಸವಾರ ಉಲ್ಲಾಸ್ ತೆಕ್ಕಟ್ಟೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದರು. ಪೊಲೀಸರ ಸೂಚನೆಯನ್ನು ಪಾಲಿಸದ ಬೈಕ್ ಸವಾರ ಬೈಕ್ ಅನ್ನು ನಿಲ್ಲಿಸದೇ ಮುಂದೆ ಚಲಿಸಿದ್ದರಿಂದ ಪೊಲೀಸರು ಬೈಕ್ ಹ್ಯಾಂಡಲ್ ಹಿಡಿದು ಎಳೆದಿದ್ದರು. ಪರಿಣಾಮ ಬೈಕ್ ಸವಾರ ಉಲ್ಲಾಸ್ ಆಯತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಘಟನೆಯಿಂದ ಎಎಸ್‌ಐ ಪ್ರಭಾಕರ್ ಅವರಿಗೂ ಗಾಯಗಳಾಗಿದ್ದು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ವರ್ತನೆಗೆ ಆಕ್ರೋಶ:

ಇನ್ನು ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸರ ಅಜಾಗರೂಕತೆಯ ವರ್ತನೆ ಬಗ್ಗೆ ಕಿಡಿಕಾರಿ ಪ್ರತಿಭಟಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸ್ಥಳಕ್ಕೆ ಉಡುಪಿ ಡಿವೈಎಸ್‌ಪಿ ಜಯಶಂಕರ್ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಲು ಪ್ರಯತ್ನಿಸಿದರು.

ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕರರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯ ವೇಳೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ವಿನೋದ ದೇವಾಡಿಗ, ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ರಮೇಶ್ ಶೆಟ್ಟಿ ವಕ್ವಾಡಿ, ಪ್ರಕಾಶ ಪೂಜಾರಿ ಬೀಜಾಡಿ, ಸಿಪಿಐ ಅನಂತಪದ್ಮನಾಭ, ಕೋಟ ಪಿಎಸ್‌ಐ ನಿತ್ಯಾನಂದ ಮೊದಲಾದವರಿದ್ದರು.