ಕುಂದಾಪುರ: ಎಂ. ಕೋಡಿ ಕಡಲತೀರಕ್ಕೆ ಬಂತು ರಾಶಿ ರಾಶಿ ಬೂತಾಯಿ; ಮೀನು ಸಂಗ್ರಹಿಸಲು ಮುಗಿಬಿದ್ದ ಜನ!

ಉಡುಪಿ: ಕುಂದಾಪುರ ತಾಲೂಕಿನ ಎಂ. ಕೋಡಿ ಕಡಲತೀರದಲ್ಲಿ ಶನಿವಾರ ಬೆಳಿಗ್ಗೆ ಭಾರಿ ಪ್ರಮಾಣದಲ್ಲಿ ಬೂತಾಯಿ (ಬೈಗೆ) ಮೀನುಗಳು ದಡಕ್ಕೆ ಬಂದಿದ್ದು, ಮೀನು ಸಂಗ್ರಹಿಸಲು ನೂರಾರು ಮಂದಿ ಕಡಲತೀರದಲ್ಲಿ ಜಮಾಯಿಸಿದರು.

ಸಮುದ್ರದ ಅಲೆಗಳೊಂದಿಗೆ ದಡಕ್ಕೆ ಬಂದ ಬೂತಾಯಿ ಮೀನುಗಳನ್ನು ಕಂಡ ಸ್ಥಳೀಯರು ಸೇರಿದಂತೆ ನೂರಾರು ಮಂದಿ ಕೈಚೀಲ, ಬಕೆಟ್‌ ಸೇರಿದಂತೆ ವಿವಿಧ ಪರಿಕರಗಳನ್ನು ಹಿಡಿದು ಮೀನು ಸಂಗ್ರಹಿಸಲು ಮುಗಿಬಿದ್ದರು.

ಕೆಲವೇ ಹೊತ್ತಿನಲ್ಲಿ ಕಡಲತೀರದಲ್ಲಿ ಮೀನು ಸಂಗ್ರಹಿಸುವವರ ಸಂಖ್ಯೆ ಹೆಚ್ಚಾಗಿದ್ದು, ಬೂತಾಯಿ ಮೀನುಗಳ ರಾಶಿ ಕಂಡುಬಂತು. ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ದಡಕ್ಕೆ ಬಂದಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು.