ಕುಂದಾಪುರ: ಕುಂದಾಪುರ, ಬೈಂದೂರು ಭಾಗಗಳಲ್ಲಿ ಅವಶ್ಯವಿರುವ ಕಡೆಗಳಲ್ಲಿ ಮರಳು ತೆಗೆಯುವ ಕುರಿತು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಕುಂದಾಪುರ ಹಾಗೂ ಬೈಂದೂರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ(ಸಿಐಟಿಯು) ಸಂಘಟನೆಯ ನೇತೃತ್ವದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮನೆಗೆ ಕಾರ್ಮಿಕರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು.
ಬೆಳಿಗ್ಗೆ ಕುಂದಾಪುರದ ವಿನಾಯಕ ಥಿಯೇಟರ್ ಎದುರಿನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ದಾರಿಯೂದ್ದಕ್ಕೂ ವಿವಿಧ ಗ್ರಾಮ ಘಟಕಗಳ ಕಾರ್ಯಕರ್ತರು ಹೂವನ್ನು ಎಸೆಯುವುದರ ಮೂಲಕ ಪಾದಯಾತ್ರೆಯನ್ನು ಸ್ವಾಗತಿಸಿದರು. ಸಂಜೆ ೪.೩೦ರ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಕಾರ್ಮಿಕರನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆಯಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಹತ್ತು ದಿನದೊಳಗೆ ಅವಶ್ಯವಿರುವ ಕಡೆಗಳಲ್ಲಿ ಬಳ್ಕೂರು ಹಾಗೂ ಮಾಬುಕಳದಿಂದ ಮರಳನ್ನು ಪೂರೈಸುವ ಕೆಲಸ ಮಾಡುತ್ತೇನೆ. ದಿನೇ ದಿನೇ ಹೋದಂತೆ ಮರಳಿನ ಪ್ರಮಾಣವನ್ನು ಅಧಿಕ ಮಾಡಿ ಅರ್ಧ ನಡೆದ ಕಾಮಗಾರಿಗಳಿಗೆ ಕೂಡಲೇ ಮರಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಈ ಬಗ್ಗೆ ಈ ಹಿಂದಿನಿಂದಲೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕಾಗಿ ಸದನದಲ್ಲಿ ಸರ್ಕಾವರನ್ನು ಸೆಳೆಯು ಕೆಲಸವನ್ನು ಮಾಡುತ್ತಾ ಬಂದಿರುವೆ ಎಂದರು.
ಕೊಟ್ಟ ಭರವಸೆಯನ್ನು ನೆನಪು ಮಾಡಿ: ಕಾರ್ಮಿಕ ಮುಖಂಡರು:
ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಮಿಕರು ಧರಣಿ ಕುಳಿತಾಗ ಉಡುಪಿ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅಕ್ಟೋಬರ್ ಹದಿನೈದರ ಒಳಗೆ ಎಲ್ಲಾ ಕಡೆಗಳಲ್ಲೂ ಮರಳು ತೆಗೆಯುವ ಪ್ರಕ್ರಿಯೆಗೆ ಚಾಲನೆ ನೀಡುತ್ತೇವೆಂದು ಎಂದು ಭರವಸೆ ನೀಡಿದ್ದರು. ಅಕ್ಟೋಬರ್ ಕಳೆದು ನವೆಂಬರ್ ಬಂದರೂ ಅವಶ್ಯವಿರುವ ಕಡೆಗಳಲ್ಲಿ ಮರಳನ್ನು ತೆಗೆಯುವ ಪ್ರಕ್ರಿಯೆಗೆ ಚಾಳನೆ ಕೊಟ್ಟಿಲ್ಲ. ಕೆಲಸವಿಲ್ಲದೆ ಕಾರ್ಮಿಕ ಕುಟುಂಬಗಳು ಬೀದಿಗೆ ಬಿದ್ದಿವೆ. ಸಚಿವರು ನೀಡಿದ ಭರವಸೆಯನ್ನು ಮತ್ತೊಮ್ಮೆ ಅವರಿಗೆ ನೆನಪು ಮಾಡಿಕೊಡಿ ಎಂದು ಪ್ರತಿಭಟನಾ ನಿರತರು ಶಾಸಕರಲ್ಲಿ ಮನವಿ ಮಾಡಿಕೊಂಡರು. ಈ ಬಗ್ಗೆ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿಯವರಲ್ಲಿ ಮಾತನಾಡುವೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಬಿರುಸಿನ ವಾಗ್ವಾದ:
ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಬಿಸಿಲಲ್ಲೇ ೨೫ಕ್ಕೂ ಅಧಿಕ ಕಿ.ಮೀ ದೂರದ ಹಾಲಾಡಿಯಲ್ಲಿರುವ ಶಾಸಕರ ಮನೆಗೆ ಬರುತ್ತಿದ್ದಂತೆಯೇ ಶಾಸಕರು ಓಡೋಡಿ ಬಂದು ಕಾರ್ಮಿಕರನ್ನು ಬರಮಾಡಿಕೊಂಡರು. ಬಳಿಕ ಮರಳು ಸಮಸ್ಯೆಯ ಬಗ್ಗೆ ಉಂಟಾದ ಕಾನೂನು ತೊಡಕುಗಳನ್ನು ಸವಿಸ್ತಾರವಾಗಿ ವಿವರಿಸಲು ಆರಂಭಿಸಿದ ವೇಳೆಯಲ್ಲಿ ಕಾರ್ಮಿಕ ಮುಖಂಡರು ಮಧ್ಯಪ್ರವೇಶಿಸಿ ಸಮಸ್ಯೆಗಳ ಬಗ್ಗೆ ಚುಟುಕಾಗಿ ಹೇಳಿ ಎಂದು ಮನವಿ ಮಾಡಿಕೊಂಡರು. ಕಾರ್ಮಿಕರೆಲ್ಲರೂ ಉರಿಬಿಸಿಲನ್ನೂ ಲೆಕ್ಕಿಸಿದೇ ಪಾದಯಾತ್ರೆಯ ಮೂಲಕ ಬಂದಿದ್ದಾರೆ. ತುಂಬಾ ಸುಸ್ತಾಗಿದ್ದಾರೆ. ನಮ್ಮ ಮನವಿ ಸ್ವೀಕರಿಸಿ ಕಳುಹಿಸಿಕೊಡಿ ಎಂದರು. ಬಳಿಕ ಶಾಸಕರು ಕೆಲ ಭರವಸೆಗಳನ್ನು ಕೊಟ್ಟ ಬಳಿಕ ಕಾರ್ಮಿಕರು ಪಾದಯಾತ್ರೆಯನ್ನು ಅಂತ್ಯಗೊಳಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷರಾದ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ. ಶಂಕರ್, ಹೆಚ್. ನರಸಿಂಹ, ಮಹಾಬಲ ವಡೇರಹೋಬಳಿ, ರಾಜು ಪಡುಕೋಣೆ, ತಾಲೂಕು ಮುಖಂಡರಾದ ಜಗದೀಶ್ ಆಚಾರ್ಯ, ಸಂತೋಷ ಹೆಮ್ಮಾಡಿ, ರಮೇಶ್ ಗುಲ್ವಾಡಿ, ಅರುಣ್ ಕುಮಾರ್ ಗಂಗೊಳ್ಳಿ, ವಿಜಯೇಂದ್ರ ಕೋಣಿ, ಚಿಕ್ಕ ಮೊಗವೀರ, ಸುಧಾಕರ ಕುಂಭಾಶಿ, ಪ್ರಶಾಂತ್ ಸಳ್ವಾಡಿ, ಶ್ರೀನಿವಾಸ ಪೂಜಾರಿ, ರಾಮಚಂದ್ರ ನಾವಡ ಮೊದಲಾದವರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.