ಕುಂದಾಪುರ: ಕುಂದಾಪುದ ಸರ್ಕಾರಿ ಆಸ್ಪತ್ರೆಯನ್ನು ತಾಯಿ-ಮಗು ಆಸ್ಪತ್ರೆಯನ್ನಾಗಿಸುವ ಕುರಿತು ಇರುವ ಬೇಡಿಕೆಯನ್ನು ಈಡೇರಿಸುವುದರ ಜತೆಯಲ್ಲಿ ಈ ಆಸ್ಪತ್ರೆಗೆ ಅವಶ್ಯಕವಾಗಿರುವ ವೈದ್ಯರು, ಸಿಬ್ಬಂದಿಗಳು ಹಾಗೂ ಸೌಲಭ್ಯಗಳನ್ನು ಕೂಡಲೇ ಒದಗಿಸುವ ಮೂಲಕ ರಾಜ್ಯದ ಮಾದರಿ ಸರ್ಕಾರಿ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ ತಾನು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯದ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಡುಪಿ ಅಂಬಲಪಾಡಿಯ ಜಿ.ಶಂಕರ್‌ಫ್ಯಾಮಿಲಿ ಟ್ರಸ್ಟ್‌ವತಿಯಿಂದ ಅಂದಾಜು ೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ೧೫೦ ಹಾಸಿಗೆಗಳ ದಿ.ಲಕ್ಷ್ಮೀ ಸೋಮ ಬಂಗೇರ ನೂತನ ಹೆರಿಗೆ ಆಸ್ಪತ್ರೆಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯಲ್ಲಿ ಇರುವ ವೈದ್ಯರ ಕೊರತೆಯನ್ನು ತುಂಬಲು ಈ ಹಿಂದೆ ಇದ್ದ ಕೆಪಿಎಸ್‌ಸಿ ನೇಮಕಾತಿ ಪದ್ದತಿಯನ್ನು ಬದಲಾಯಿಸಿ ಆರೋಗ್ಯ ಇಲಾಖೆಯ ಮೂಲಕವೇ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ಅರ್ಹ ವೈದ್ಯರನ್ನು ಗುರುತಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಆದ್ಯತೆಯ ನೆಲೆಯಲ್ಲಿ ಅವರ ಸೇವೆ ಬಳಸಿಕೊಳ್ಳಲಾಗುವುದು.
ಎನ್‌ಆರ್‌ಎಚ್‌ಎಂ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಶುಶ್ರೂಷಕಿಯರನ್ನು ಹೊರತುಪಡಿಸಿ ಕನಿಷ್ಠ ವೇತನ ಪಡೆದುಕೊಳ್ಳುವ ಶುಶ್ರೂಷಕಿಯರ ವೇತನವನ್ನು ೧೭,೫೦೦ ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಆಯಾಗಳ ಸೇವೆಯನ್ನು ಖಾಯಂ ಮಾಡಬೇಕು ಎನ್ನುವ ಬೇಡಿಕೆ ಇದ್ದು ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನ್ಯಾಯ ಕೊಡಿಸಲಾಗುವುದು. ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ೫೦೦ ರೂ. ಹೆಚ್ಚಿಸಲು ಪ್ರಾಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅವರಿಗೆ ೯,೦೦೦ ರೂ. ದೊರಕುವಂತೆ ಪ್ರಯತ್ನ ಮಾಡಲಾಗುವುದು ಎಂದರು.
ನಗುಮೊಗದ ಸೇವೆ ನೀಡಿ:
ರೋಗಿಗಳು ಬಂದಾಗ ಖಾಸಗಿ ಆಸ್ಪತ್ರೆಯ ವೈದ್ಯರಂತೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ನಗು-ಮುಖದ ಸೇವೆಯನ್ನು ನೀಡಬೇಕು. ಸರ್ಕಾರಿ ಹಾಗೂ ಖಾಸಗಿ ಎನ್ನುವ ಎರಡು ದೋಣಿಗಳಲ್ಲಿ ಸಾಗುವ ವೈದ್ಯರ ವಿರುದ್ದ ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಒಂದಿಬ್ಬರು ವ್ಯಕ್ತಿಗಳು ಮಾಡುವ ಭ್ರಷ್ಟಾಚಾರ ಹಾಗೂ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ವೈದ್ಯ ಸಮೂಹಕ್ಕೆ ಕಳಂಕ ಆಗಬಾರದು. ತಪ್ಪು ಮಾಡಿರುವ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ಪ್ರತಿಯೊಬ್ಬರು ಅಧಿಕಾರ ಹಾಗೂ ಸ್ವಾರ್ಥವನ್ನು ನೋಡುವ ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಗುಣಮಟ್ಟದ ಸೌಲಭ್ಯಗಳುಳ್ಳ ಆಸ್ಪತ್ರೆಯನ್ನು ಕಟ್ಟಿ ಸರ್ಕಾರಕ್ಕೆ ನೀಡುವ ಮೂಲಕ ಡಾ.ಜಿ.ಶಂಕರ ರಾಜ್ಯಕ್ಕೆ ಮಾದರಿ ಎನಿಸುವಂತಾ ಮಾನವೀಯ ಮೌಲ್ಯದ ಹರಿಕಾರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಹೆರಿಗೆ ಆಸ್ಪತ್ರೆಗಳು ಇಲ್ಲದ ದಿನಗಳಲ್ಲಿ ಹೆರಿಗೆಯ ಸಮಯದಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಸಾಕಷ್ಟು ಆಸ್ಪತ್ರೆಗಳು ಆಗಿರುವುದರಿಂದ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಬಡವರ ವೈದ್ಯಕೀಯ ಚಿಕಿತ್ಸೆಗಳಿಗೆ ಸಹಾಯವಾಗಲಿ ಎಂದು ಅನುಷ್ಠಾನಕ್ಕೆ ಬಂದಿರುವ ಆಯುಷ್ಮಾನ್‌ಯೋಜನೆಯ ನಿಯಮಾವಳಿಗಳಿಂದಾಗಿ ಶೇ.೫೦ ರಷ್ಟು ಜನರಿಗೂ ಇದರ ಉಪಯೋಗವಾಗುತ್ತಿಲ್ಲ. ಇದನ್ನು ಸರಳೀಕರಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆಯಲ್ಲಿ ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘ ಸಿಐಟಿಯು ತಾಲೂಕು ಕಾರ್ಯದರ್ಶಿ ಶೀಲಾವತಿ ಪಡುಕೋಣೆ ಆಶಾ ಕಾರ್ಯಕರ್ತರ ಹಕ್ಕೊತ್ತಾಯಗಳ ಮನವಿಯನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ನೀಡಿದರು.
ಉಡುಪಿ ಅಂಬಲಪಾಡಿಯ ಜಿ.ಶಂಕರ್‌ಫ್ಯಾಮಿಲಿ ಟ್ರಸ್ಟ್‌ಪ್ರವರ್ತಕ ಡಾ.ಜಿ.ಶಂಕರ ಪ್ರಾಸ್ತಾವಿಕ ಮಾತನಾಡಿದರು.
ಶಾಲಿನಿ ಜಿ.ಶಂಕರ ಹೆರಿಗೆ ವಾರ್ಡ್‌ನ್ನು ಉದ್ಘಾಟಿಸಿದರು. ಶಾಸಕರಾದ ರಘುಪತಿ ಭಟ್, ಬಿ.ಎಂ.ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಆರೋಗ್ಯಾಧಿಕಾರಿ ಡಾ.ರಾಬರ್ಟ್ ಇದ್ದರು.
ಡಾ.ಆರತಿ, ಡಾ.ಚಂದ್ರ ಮರಕಾಲ, ಡಾ.ವಿಜಯ್‌ಶಂಕರ, ಇಂಜಿನಿಯರ್‌ಯೋಗೀಶ್, ಪ್ರಕಾಶ ಕರ್ಕೇರಾ, ನಂದ ಕಿಶೋರ, ಜಗದೀಶ್‌ಮಾರ್ಕೋಡು ಅವರನ್ನು ಗೌರವಿಸಲಾಯಿತು.
ಸತೀಶ್‌ಎಂ ನಾಯಕ್‌ಸ್ವಾಗತಿಸಿದರು, ಸದಾನಂದ ಬಳ್ಕೂರು ವಂದಿಸಿದರು, ಅಶೋಕ ತೆಕ್ಕಟ್ಟೆ ಹಾಗೂ ಸುಧಾಕರ ಕಾಂಚನ್ ನಿರೂಪಿಸಿದರು.