ಕುಂದಾಪುರ: ಕಳೆದ ಹಲವು ತಿಂಗಳುಗಳಿಂದ ಕಾಮಗಾರಿ ನಡೆಸದೇ ನೆನಗುದಿಗೆ ಬಿದ್ದಿದ್ದ ಕುಂದಾಪುರ ಫ್ಲೈ ಓವರ್ ಕಾಮಗಾರಿಯನ್ನು ನವಯುಗ ಗುತ್ತಿಗೆ ಕಂಪೆನಿ ಮತ್ತೆ ಪ್ರಾರಂಭಿಸಿದೆ.
ಇಲ್ಲಿನ ನಕ್ಷತ್ರ ಜ್ಯೂವೆಲ್ಲರ್‍ಸ್ ಎದುರಿನ ಫ್ಲೈಓವರ್ ಏಂಬ್ಯಾಕ್‌ಮೆಂಟ್ ಕಾಮಗಾರಿಯನ್ನು ಆರಂಭಿಸಿರುವ ನವಯುಗ ಕಂಪೆನಿ ಮಣ್ಣನ್ನು ಸಮತಟ್ಟುಗೊಳಿಸುವಲ್ಲಿ ಮುಂದಾಗಿದೆ.
ಕುಂದಾಪುರ ಫ್ಲೈಓವರ್ ವಿಳಂಬ ಕಾಮಗಾರಿಯನ್ನು ವಿರೋಧಿಸಿ ಶೀಘ್ರವೇ ಕಾಮಗಾರಿ ಮುಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸೋಮವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಿತ್ತು. ಆ ವೇಳೆಯಲ್ಲಿ ಸ್ಥಳಕ್ಕಾಗಮಿಸಿದ ನವಯುಗ ಅಧಿಕಾರಿಗಳು ಎರಡು ದಿನಗಳೊಳಗೆ ಕಾಮಗಾರಿ ಆರಂಭಿಸಿ ೨೦೨೦, ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಫ್ಲೈಓವರ್ ಕಾಮಗಾರಿ ಮತ್ತೆ ಆರಂಭವಾಗಿರುವುದನ್ನು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸ್ವಾಗತಿಸಿದೆ.
ಕಾಮಗಾರಿ ಸ್ಥಳಕ್ಕೆ ಜೆ.ಪಿ ಹೆಗ್ಡೆ ಭೇಟಿ:
ಗುರುವಾರ ಕುಂದಾಪುರ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ ಕಿಶೋರ್ ಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಉಪಸ್ಥಿತರಿದ್ದರು.