ಕುಂದಾಪುರ: ಫ್ಲೈಓವರ್‌ನ ವಿಳಂಬ ಕಾಮಗಾರಿ: ಅವ್ಯವಸ್ಥೆಯನ್ನು ಸರಿಪಡಿಸಲು ನಾನೂ ಹೋರಾಡ್ತೇನೆ:ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಗುತ್ತಿಗೆದಾರ ಕಂಪೆನಿಗೆ ಸ್ಥಳೀಯ ಗುತ್ತಿಗೆದಾರರ ಸಹಕಾರ ಅಪೇಕ್ಷಿಸಿದಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸುತ್ತೇನೆ. ಲೋಕಸಭಾ ಸದಸ್ಯರು, ಶಾಸಕರು, ಹೋರಾಟ ಸಮಿತಿಯವರು ಜತೆಯಾಗಿ ದೆಹಲಿಗೆ ತೆರಳಿ ಅಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದರೆ ಮಾತ್ರ ಸಮಸ್ಯೆ ಪರಿಹಾರ ಆಗುತ್ತೆ. ಶಾಸಕರು, ಸಂಸದರು ಹೋಗುವಾಗ ನನ್ನನ್ನು ಕರೆದರೆ ನಾನೂ ಹೋಗುತ್ತೇನೆ. ಅವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನದಲ್ಲಿ ನಾನು ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದು ಜಯಪ್ರಕಾಶ್ ಹೆಗ್ಡೆ ಭರವಸೆ ವ್ಯಕ್ತಪಡಿಸಿದರು.

ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಆಮೆಗತಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈಓವರ್‌ನ ವಿಳಂಬ ಕಾಮಗಾರಿಯನ್ನು ವಿರೋಧಿಸಿ, ನಿಗದಿತ ಅವಧಿಯೊಳಗೆ ಫ್ಲೈಓವರ್ ಹಾಗೂ ರಸ್ತೆ ಕಾಮಗಾರಿಯನ್ನು ಮುಗಿಸಲು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತ್ರತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

೨೦೧೬ರಲ್ಲಿ ಬದಲಾದ ಪ್ರಸ್ತಾವಿತ ಯೋಜನೆಗೆ ೨೨.೨೪ ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ದೊರಕಿತ್ತು. ಇದೀಗ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ಹಲವು ಕಾರಣಗಳಿವೆ. ಇದರ ನಿವಾರಣೆಗೆ ದೆಹಲಿಯಲ್ಲಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ನಾನು ಹಿಂದೆ ಸಂಸದನಾಗಿದ್ದ ಅವಧಿಯಲ್ಲಿ ನಡೆಸಿದ ಅಡಿಕೆ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸಬೇಕಾಗಿದೆ ಎಂದರು.

ಶಾಸ್ತ್ರೀವೃತ್ತದ ಫ್ಲೈಓವರ್ ಅನ್ನು ಯಾರು, ಯಾರ ಅವಧಿಯಲ್ಲಿ ಮಾಡಿದ್ದು, ಇದರ ಅಗತ್ಯವಿತ್ತಾ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಯಪ್ರಕಾಶ್ ಹಗ್ಡೆ, ರಾಷ್ಟ್ರೀಯ ಹೆದ್ದಾರಿ ಚತುಷ್ಫತ ವಿಸ್ತರಣೆಯ ಮೂಲ ಯೋಜನೆಯಲ್ಲಿ ಕುಂದಾಪುರದ ಶಾಸ್ತ್ರಿವೃತ್ತದ ಬಳಿಯಲ್ಲಿ ರಸ್ತೆಗೆ ಎಂಬ್ಯಾಕ್‌ಮೆಂಟ್ ನಿರ್ಮಾಣ ಮಾಡಿ ಸಣ್ಣ ಪ್ರಮಾಣದ ಅಂಡರ್‌ಪಾಸ್ ನಿರ್ಮಾಣ ಮಾಡುವ ಉದ್ದೇಶ ಇತ್ತು. ಆದರೆ ಅಂದು ಎಂಬ್ಯಾಕ್‌ಮೆಂಟ್ ನಿರ್ಮಿಸಿ ಕುಂದಾಪುರವನ್ನು ಇಬ್ಬಾಗ ಮಾಡುವುದು ಬೇಡ ಎಂಬ ಸ್ಥಳೀಯರ ಒತ್ತಾಯದಂತೆ ನನ್ನ ಅವಧಿಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಫ್ಲೈ ಓವರ್ ನಿರ್ಮಾಣದ ಪ್ರಾಸ್ತಾವನೆಗೆ ಒಪ್ಪಿಗೆ ಪಡೆಯಲಾಯಿತು ಎಂದರು.

ಶಾಸ್ತ್ರೀ ವೃತ್ತದಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಪ್ರತಮಿಗೆ ಮಾಲಾರ್ಪಣೆ ಮಾಡಿ ಧರಣಿಗೆ ಚಾಲನೆ ನೀಡಿ ಮಾತನಾಡಿದ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ರಾ.ಹೆದ್ದಾರಿ ಅವೈಜ್ಙಾನಿಕ ಕಾಮಗಾರಿಗಳ ಬಗ್ಗೆ ವಿವರಿಸಿದರು. ಯೋಜನಾ ವೆಚ್ಚ ತಯಾರಿಸದೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಹಣಗಳು ಯೋಜನೆಗೆ ಬಳಕೆಯಾದರೂ, ಪ್ರಶ್ನಿಸುವವರು ಇಲ್ಲ. ಜಿಲ್ಲೆಯಲ್ಲಿ ನಡೆಯುವ ಯಾವುದೆ ಸಭೆಗಳಿಗೂ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳನ್ನು ಕರೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದವರು ತೆಗೆದುಕೊಂಡಿರುವ ನಿರ್ಧಾರಗಳು ಅವರು ವರ್ಗಾವಣೆಯಾಗುತ್ತಿದ್ದಂತೆ ಬದಲಾಗುತ್ತದೆ. ಕೇವಲ ೧೦.೫ ಕಿ.ಮೀ ದೂರದಲ್ಲಿ ೨ ಟೋಲ್‌ಗೇಟ್ ನಿರ್ಮಾಣವಾಗಿದ್ದರೂ, ನಮ್ಮ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟ ಸಮಿತಿಯ ಪ್ರಮುಖರಾದ ಕಿಶೋರ ಕುಮಾರ್ ಮಾತನಾಡಿ, ನಮ್ಮ ಮುಗ್ದತೆ, ದೌರ್ಬಲ್ಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಗತಿಗೆಟ್ಟ ಗುತ್ತಿಗೆ ಕಂಪೆನಿಗೆ ವರವಾಗುತ್ತಿದೆ. ೨೦೧೦ ರಲ್ಲಿ ಆರಂಭವಾದ ಕಾಗಾರಿ ೨೦೧೩ರಲ್ಲಿ ಮುಗಿಯಬೇಕಿತ್ತು. ಎಂಬ್ಯಾಕ್‌ಮೆಂಟ್ ಅನ್ನು ಫ್ಳೈಓವರ್ ಆಗಿ ಪರಿವರ್ತಿಸಿದ್ದರಿಂದ ಫ್ಲೈಓವರ್ ನಿಧಾನವಾಗಿ ಸಾಗುತ್ತಿದೆ ಎನ್ನುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ದಿಕ್ಕು ತಪ್ಪಿಸುತ್ತಿದ್ದಾರೆ  ಎಂದರು.

ಜನಪ್ರತಿನಿಧಿಗಳ ಪಂಚೇಂದ್ರೀಯ ಕೆಲಸ ಮಾಡುತ್ತಿಲ್ಲ!:
ವಕೀಲ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ ಮಾತನಾಡಿ, ಪ್ರಾಣ ಹಾನಿ ಹಾಗೂ ಸ್ವತ್ತು ಹಾನಿ ನಿಯಂತ್ರಣ ಮಾಡುವ ಉದ್ದೇಶಕ್ಕಾಗಿ ರೂಪಿಸಲಾದ ಚತುಷ್ಪಥ ಯೋಜನೆಯ ಮೂಲ ಉದ್ದೇಶಗಳೇ ಮರೆಯಾಗುತ್ತಿದೆ. ಸುಂಕ ಕೊಟ್ಟು ಸಂಕಷ್ಟ ಪಡೆದುಕೊಳ್ಳಲಾಗುತ್ತಿದೆ. ಹೆದ್ದಾರಿ ವಿಸ್ತರಣೆಯಾದ ಬಳಿಕ ಜೀವ ಹಾನಿ ಹಾಗೂ ಸ್ವತ್ತು ಹಾನಿ ಹೆಚ್ಚಾಗುತ್ತಿದೆ. ನಿಯಮಕ್ಕೆ ವಿರುದ್ಧವಾಗಿ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದೆ. ಹೆದ್ದಾರಿಯಲ್ಲಿ ಸಮರ್ಪಕವಾದ ದಾರಿದೀಪದ ವ್ಯವಸ್ಥೆ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ಇದ್ದರೆಷ್ಟು, ಬಿಟ್ಟರೆಷ್ಟು. ಆನಪ್ರತಿನಿಧಿಗಳು ಹಾಗೂ ಸರ್ಕಾರಗಳ ಪಂಚೇಂದ್ರೀಯಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಎಚ್ ನರಸಿಂಹ ಕಂಪೆನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಸಿಪಿಐಎಂ ಪಕ್ಷದ ಹಿರಿಯ ಮುಖಂಡರಾದ ವೆಂಕಟೇಶ ಕೋಣಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಹಿರಿಯ ವಕೀಲ ಎ.ಎಸ್.ಎನ್‌ಹೆಬ್ಬಾರ್, ಸಾಸ್ತಾನ ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್‌ಸುಂದರ್ ನಾಯರಿ ಮುಂತಾದವರು ಮಾತನಾಡಿದರು.

೨೦೨೦, ಮಾರ್ಚ್ ೩೦ಕ್ಕೆ ಗಡವು:
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಕೆ.ರಾಜು, ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದ ಬಳಿಕ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆ ಕಂಪೆನಿ ಅಧಿಕಾರಿಗಳಲ್ಲಿ ಯೋಜನೆಯನ್ನು ಯಾವಾಗ ಮುಗಿಸುತ್ತೀರಿ ಎನ್ನುವ ಸ್ವಷ್ಟ ಭರವಸೆ ನೀಡುವಂತೆ ಸೂಚಿಸಿದರು. ಪ್ರತಿಸ್ಪಂದಿಸಿದ ಅಧಿಕಾರಿಗಳು ೨೦೨೦, ಮಾ.೩೧ ರ ಒಳಗೆ ಮುಗಿಸುವ ಭರವಸೆ ನೀಡಿದರು.

ನಿಗದಿತ ದಿನಾಂಕದ ಒಳಗೆ ಕಾಮಗಾರಿ ಪೂರ್ಣಗೊಳ್ಳದೆ ಹೋದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮಾ.೩೧ ರಿಂದ ಟೋಲ್‌ಸಂಗ್ರಹ ಬಂದ್ ಮಾಡಲಾಗುತ್ತದೆ. ಎ.ಸಿ ಕೋರ್ಟ್‌ನಲ್ಲಿ ೧೩೩ ಕಾನೂನು ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲಾಗುತ್ತದೆ. ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಸಂಬಂಧಿತರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಉಪವಿಭಾಗಾಧಿಕಾರಿ ಹೇಳಿದರು.

ಹೆದ್ದಾರಿ ತಡೆಗೆ ಯತ್ನಿಸಿದ ಪ್ರತಿಭಟನಾಕಾರರು:
ಅಧಿಕಾರಿಗಳು ನೀಡಿದ ಭರವಸೆಗಳಿಗೆ ತೃಪ್ತರಾಗದ ಪ್ರತಿಭಟನಾಕಾರರು ಧರಣಿ ಮುಗಿದು ಧನ್ಯವಾದ ಸಮರ್ಪಿಸುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ರಸ್ತೆ ತಡೆ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ನವಯುಗ ಗುತ್ತಿಗೆ ಕಂಪೆನಿ ವಿರುದ್ದ ಧೀಕ್ಕಾರಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಏಕಾಏಕಿ ನಡೆದ ಬೆಳವಣಿಗೆಯಿಂದ ಒಂದು ಕ್ಷಣ ವಿಚಿಲಿತರಾದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೂಲಿಕೆಗೆ ಮುಂದಾದರು. ಈವೇಳೆಯಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಬಿರುಸಿನ ವಾಗ್ವಾದ ನಡೆಯಿತು. ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್ ಹಾಗೂ ಎಸ್.ಐ ಹರೀಶ್ ನಾಯ್ಕ್ ಅವರ ಮನವೂಲಿಕೆಯಿಂದಾಗಿ ಬಳಿಕ ಹೆದ್ದಾರಿ ತಡೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಸೋಮಶೇಖರ ಶೆಟ್ಟಿ ಕೆಂಚನೂರು, ಬಿ.ಕಿಶೋರಕುಮಾರ, ರಾಜೇಶ್‌ಕಾವೇರಿ, ಶಶಿಧರ ಹೆಮ್ಮಾಡಿ, ನಿತ್ಯಾನಂದ ಶೆಟ್ಟಿ ಅಂಪಾರು, ಗಣೇಶ್ ಮೆಂಡನ್, ನ್ಯಾಯವಾದಿಗಳಾದ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಮಲ್ಯಾಡಿ ಜಯರಾಮ್‌ಶೆಟ್ಟಿ, ಕೆ.ಸಿ.ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಪಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಜಿ.ಕೆ.ಗಿರೀಶ್, ಅಬ್ಬು ಮಹಮ್ಮದ್, ಪ್ರಭಾವತಿ ಶೆಟ್ಟಿ, ಸ್ಥಳೀಯರಾದ ವಿನೋದ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಶ್ರೀಧರ ಗೋಲ್ಡ್‌ನ್ ಮಿಲ್ಲರ್, ನವೀನ್ ಕೋತ್ ಆನಗಳ್ಳಿ, ಸುಧಾಕರ ಕಾಂಚನ್, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ವಿಠ್ಠಲ್ ಪೂಜಾರಿ ಸಾಸ್ತಾನ, ಪ್ರಶಾಂತ ಶೆಟ್ಟಿ ಸಾಸ್ತಾನ, ರಾಜೇಶ್‌ಕೆ.ವಿ ಪಾಂಡೇಶ್ವರ, ವೆಂಕಟೇಶ್ ಕೋಣಿ, ರಿಕ್ಷಾ ಚಾಲಕರಾದ ಲಕ್ಷ್ಮಣ್ ಬರೇಕಟ್ಟು, ರಾಜು ದೇವಾಡಿಗ, ರಮೇಶ್ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.