ಉಡುಪಿ: ಕುಂದಾಪುರ ವೆಂಕಟರಮಣ ದೇವಸ್ಥಾನದ ಎದುರಿನ ರಥಬೀದಿಯಲ್ಲಿರುವ ಪಟಾಕಿ ಅಂಗಡಿಯೊಂದರಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಲವು ಅಂಗಡಿಗಳು ಬೆಂಕಿಗಾಹುತಿಯಾಗಿವೆ.
ಕಟ್ಟಡದಲ್ಲಿದ್ದ ಪಟಾಕಿ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಪುಸ್ತಕದಂಗಡಿ ಸೇರಿದಂತೆ ಐದಾರು ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದೆ. ಸೋಮವಾರ ಮುಂಜಾನೆ ಮೂರು ಗಂಟೆಗೆ ಸುಮಾರಿಗೆ ಘಟನೆ ನಡೆದಿದ್ದು, ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಪಟಾಕಿಗಳು ಸಿಡಿದ ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಕಾಲ ಆತಂಕ ವಾತಾವರಣ ಉಂಟಾಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೋಟ್ಯಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ.

















