udupixpress
Home Trending ಕುಂದಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಕೊರೋನಾ ಸೋಂಕಿತರಿಗೆ ಮೀಸಲು:ಜಿಲ್ಲಾಧಿಕಾರಿ

ಕುಂದಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಕೊರೋನಾ ಸೋಂಕಿತರಿಗೆ ಮೀಸಲು:ಜಿಲ್ಲಾಧಿಕಾರಿ

ಕುಂದಾಪುರ : ಕುಂದಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಪ್ರಸ್ತುತ ಆಸ್ಪತ್ರೆಯಲ್ಲಿರುವ ಗರ್ಭೀಣಿಯರು ಹಾಗೂ ಬಾಣಂತಿಯರನ್ನು ಕೋಟ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಳೆದೆರಡು ದಿನಗಳಲ್ಲಿ ಬಂದಿರುವ ಪರೀಕ್ಷಾ ವರದಿಗಳಲ್ಲಿ ಅತೀ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಕಂಡು ಬರುತ್ತಿರುವುದರಿಂದ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಹೊಂದಿಕೊಂಡಂತೆ ಚಿಕಿತ್ಸೆ ನೀಡಲು ಒಟ್ಟು 400 ಬೆಡ್‍ಗಳ ಕೋವಿಡ್ ಚಿಕಿತ್ಸಾ ಆಸ್ಪತ್ರೆ ತೆರೆಯಲು ಯೋಜನೆ ರೂಪಿಸಲಾಗಿದೆ. ಇಲ್ಲಿನ ಹಳೆಯ ವಿನಯ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ ತೆರೆಯಲು ಚಿಂತನೆ ನಡೆಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 120 ಬೆಡ್‍ಗಳಿಗೆ ವ್ಯವಸ್ಥೆ ಇದ್ದು, ಇದನ್ನು ಹೆಚ್ಚು ಮಾಡಲಾಗುವುದು. ಹಳೆಯ ಆದರ್ಶ ಆಸ್ಪತ್ರೆಯಲ್ಲಿ 65 ಬೆಡ್‍ಗಳಿಗೆ ಅವಕಾಶವಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,500 ಕ್ಕಿಂತ ಅಧಿಕ ಮಂದಿ ಹೊರ ರಾಜ್ಯದಿಂದ ಬಂದಿರುವುದರಿಂದ, ಸೋಂಕಿತರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಲಲಿತಾಂಬಿಕಾ ವಸತಿ ನಿಲಯವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಸೋಂಕು ಪ್ರಮಾಣ ಕಡಿಮೆ ಇರುವವರಿಗೆ ಕೊಲ್ಲೂರು ಹಾಗೂ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಉಡುಪಿಯ ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುವುದು ಎಂದರು.

ಹೊರ ರಾಜ್ಯಗಳಿಂದ ಬಂದಿರುವ 8,400 ಮಂದಿಯನ್ನು ನಿಯಮಾಳಿಯಂತೆ ಕ್ವಾರಂಟೈನ್ ಮಾಡಿ ಮನೆಗೆ ಕಳುಹಿಸಿದ್ದೇವೆ. 7 ದಿನಗಳ ಕ್ವಾರಂಟೈನ್ ಮುಗಿಸಿದವರು 7 ದಿನಗಳ ಹೋಂ ಕ್ವಾರಂಟೈನ್ ಮಾಡುವುದು ಕಡ್ಡಾಯವಾಗಿದೆ. ಗಂಟಲು ದೃವದ ಪರೀಕ್ಷೆ ನಡೆದು ಸೋಂಕು ಇಲ್ಲ ಎನ್ನುವುದು ದೃಢವಾಗುವವರೆಗೂ ಯಾರು ಮನೆ ಬಿಟ್ಟು ಹೊರಕ್ಕೆ ಬರಬಾರದು. ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ವರದಿಯಲ್ಲಿ ಸೋಂಕು ದೃಢವಾಗಿದ್ದಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುವ ಕೆಲಸವಾಗುತ್ತಿದೆ. ಇಂತಹ ಪ್ರಕರಣ ಕಂಡು ಬಂದಿರುವ ಪ್ರದೇಶಗಳನ್ನು ಸೀಲ್‍ಡೌನ್ ಮಾಡಿ ಸುರಕ್ಷತೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇಬ್ಬರನ್ನು ಪತ್ತೆ ಹಚ್ಚಲಾಗಿದೆ: ಡಿಸಿ
ಸೋಮವಾರ ಸೋಂಕು ದೃಢವಾಗಿ ಸಂಪರ್ಕಕ್ಕೆ ದೊರಕದೆ ಇದ್ದ 5 ಜನರಲ್ಲಿ ಇಬ್ಬರನ್ನು ಪತ್ತೆ ಹಚ್ಚಲಾಗಿದೆ. ಇನ್ನೂ 3 ಜನರ ಪತ್ತೆಗಾಗಿ ಎಸ್.ಪಿ ಯವರಿಗೆ ಸೂಚನೆ ನೀಡಲಾಗಿದೆ. ಕೋವಿಡ್ ನಿಯಂತ್ರಣದ ನಿಯಮಾವಳಿಗಳಿಂದ ಜನರಿಗೆ ಸ್ವಲ್ಪ ತೊಂದರೆಯಾದರೂ, ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು. ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ಸುತ್ತಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಜಿಲ್ಲೆಯಲ್ಲಿ ಕ್ವಾರಂಟೈನ್ ಅವಧಿಯನ್ನು ಕಡಿತಗೊಳಿಸುವ ನಿರ್ಧಾರ ಜಿಲ್ಲಾಡಳಿತ ಕೈಗೊಂಡಿದ್ದಲ್ಲ. ಭಾರತದ ಐಸಿಎಂಆರ್ ನಿರ್ದೇಶನದ ಪ್ರಕಾರವೇ ದೇಶಾದ್ಯಾಂತ ಒಂದೆ ರೀತಿಯ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ. ಹೊರ ರಾಜ್ಯದಿಂದ ಜನರು ಬರುತ್ತಾರೆ ಎನ್ನುವುದು ಖಚಿತವಾಗುತ್ತಿದ್ದಂತೆ, ಸೋಂಕಿತರ ಪ್ರಮಾಣ ಹೆಚ್ಚಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಪೂರ್ವಭಾವಿಯಾಗಿ ಸಭೆ ನಡೆಸಿ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚುತ್ತಿರುವ ಸೋಂಕಿತರ ಪ್ರಮಾಣವನ್ನು ನಿಯಂತ್ರಣ ಮಾಡಲು ಹಾಗೂ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ್‍ಕಿಶನ್ ಹೆಗ್ಡೆ, ತಹಶೀಲ್ದಾರ್ ಕೆ.ಬಿ.ಆನಂದಪ್ಪ ನಾಯಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕುಂದಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ, ಡಾ.ನಾಗೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಕೇಶವ್ ಶೆಟ್ಟಿಗಾರ್, ಭಾರತಿ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

error: Content is protected !!