ನೆರಳು ನೀಡಿದ್ದ ಮರದ ಕೊರಳು ತೆಗೆದ ಕುಂದಾಪುರ ಪುರಸಭೆ: ನ್ಯಾಯದೇವತೆಗೂ ಕೇಳಿಸದೆ ಹೋಯ್ತೇ ಮರಗಳ ಮೂಕ ರೋದನ !!

ಶ್ರೀಕಾಂತ ಹೆಮ್ಮಾಡಿ ಕುಂದಾಪುರ
ಕುಂದಾಪುರ: ಶತಮಾನದಿಂದಲೂ ಸುಡುಬಿಸಿಲನ್ನು ಲೆಕ್ಕಿಸದೇ ನಿಮಗೆಲ್ಲಾ ನೆರಳು, ಆಮ್ಲಜನಕ ನೀಡಿದ್ದೇನೆ. ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಜಾಗ ಕೊಟ್ಟಿದ್ದೇನೆ. ಮುಂದೆಯೂ ನನ್ನ ಸೇವೆ ಹೀಗೆಯೇ ಮುಂದುವರಿಸುವೆ. ಆದರೆ ಅಭಿವೃದ್ದಿಯ ಹೆರಿನಲ್ಲಿ ನನ್ನನ್ನು ಕೊಲ್ಲಬೇಡಿ ಎಂದು ನ್ಯಾಯಾಲಯದ ಮುಂದೆ ಮರಗಳು ಮೌನವಾಗಿ ರೋದಿಸುತ್ತಿವೆ.

ಕುಂದಾಪುರದ ನ್ಯಾಯಾಲಯ ಹಾಗೂ ಮಿನಿವಿಧಾನಸೌದದ ಮುಂದೆ ಬೃಹದಾಕಾರವಾಗಿ ಬೆಳೆದು ಅದೆಷ್ಟೋ ವರ್ಷಗಳಿಂದ ವಾಹನಗಳಿಗೆ, ಕುಗ್ರಾಮಗಳಿಂದ ಅರ್ಜಿ ಹಿಡಿದು ತಾಲೂಕು ಕಚೇರಿಗೆ ಬಂದ ಬಡಜನರಿಗೆ ನೆರಳು ಕೊಡುತ್ತಿದ್ದ ದೇವದಾರು ಮರಗಳ ಬೇರುಗಳಿಗೆ ಇದೀಗ ಅಭಿವೃದ್ದಿಯ ಹೆಸರಲ್ಲಿ ಕೊಡಲಿ ಏಟು ಹಾಕಲಾಗಿದೆ. ॒

ಕಾಡು ಬೆಳೆಸಿ-ನಾಡು ಉಳಿಸಿ ಎನ್ನುವುದು ಕೇವಲ ಘೋಷಣೆಯಾಗಿ ಉಳಿದಿದೆ. ಪರಿಸರ ಸಂರಕ್ಷಣೆಯ ಫಲಕಗಳು ಸರ್ಕಾರಿ ಕಚೇರಿಗಳ ಗೋಡೆಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ. ಇದ್ದ ಮರಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಿದ್ದ ಪುರಸಭೆ ಮರಗಳ ನಾಶಕ್ಕೆ ಮುಂದಾಗಿರುವುದು ಇದೀಗ ಪರಿಸರ ಪ್ರೇಮಿಗಳನ್ನು, ಪ್ರಜ್ಙಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕುಂದಾಪುರ ಮಿನಿವಿಧಾನಸೌದದ ಕಚೇರಿ ಹಾಗೂ ನ್ಯಾಯಾಲಯದ ಮುಂದಿರುವ ಸುಮಾರು ೭೦ ಸೆಂಟ್ಸ್ ಜಾಗದಲ್ಲಿ ಆರೇಳು ದೇವದಾರು ಮರಗಳು ಶತಮಾನದಿಂದಲೂ ಸಾರ್ವಜನಿಕರಿಗೆ ನೆರಳು ಕೊಡುತ್ತಿದೆ. ಈ ಮರಗಳ ಅಡಿಯಲ್ಲಿ ನ್ಯಾಯಾಲಯ, ತಾಲೂಕು ಕಚೇರಿ, ಪೊಲೀಸ್ ಠಾಣೆಗಳಿಗೆ ಬರುವವರು ತಮ್ಮ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಬಾವಿ, ಶೌಚಾಲಯ ಎಲ್ಲವೂ ಇದೇ ಜಾಗದಲ್ಲಿದೆ.

ಇಂಟರ್‌ಲಾಕ್ ಅಳವಡಿಕೆ, ಚರಂಡಿ ನಿರ್ಮಾಣ
ಪುರಸಭೆಯು ೧೬ನೇ ಹಣಕಾಸು ಯೋಜನೆಯಡಿಯಲ್ಲಿ ಕೇವಲ ೪೦ ಸೆಂಟ್ಸ್ ಜಾಗಕ್ಕೆ ಮಾತ್ರ ೨೩ ಲಕ್ಷ ವೆಚ್ಚದ ಮೊದಲ ಹಂತದ ಕಾಮಗಾರಿ ಇಂಟರ್‌ಲಾಕ್ ಅನ್ನು ಅಳವಡಿಸಲು ಮುಂದಾಗಿದೆ. ಇದೇ ಸ್ಥಳದಲ್ಲಿರುವ ಬಾವಿ ಶುದ್ದೀಕರಣ, ಶೌಚಾಲಯದ ಫಿಟ್ ಸ್ಥಳಾಂತರ ಸೇರಿದಂತೆ, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣಕ್ಕೆ ಪ್ರತ್ಯೇಕ ೫ಲಕ್ಷ ಸೇರಿದಂತೆ ಒಟ್ಟು ೨೮ಲಕ್ಷರೂ ವೆಚ್ಚದ ಕಾಮಗಾರಿಗೆ ಪುರಸಭೆ ಮುಂದಾಗಿದೆ.

ಕಟ್ಟೆ ನಿರ್ಮಿಸುವ ಹೆಸರಲ್ಲಿ ಬೇರುಗಳಿಗೆ ಕೊಡಲಿ:
ಈ ಪ್ರದೇಶದಲ್ಲಿರುವ ದೇವದಾರು ಮರಗಳ ಬುಡಕ್ಕೆ ಕಟ್ಟೆ ನಿರ್ಮಾಣ ಕಾರ್ಯವೂ ಕೂಡ ಭರದಿಂದ ಸಾಗಿದೆ. ಈಗಾಗಲೇ ಜಾಗವನ್ನು ಸಮತಟ್ಟುಗೊಳಿಸಿದ್ದು, ಮರಗಳ ಬೇರುಗಳನ್ನು ತುಂಡರಿಸಿ ಮರಗಳಿಗೆ ಕಟ್ಟೆ ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರ ಈ ನಡೆಗೆ ಪರಿಸರಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದೊಂದು ದಿನ ಅಪಾಯ ಖಚಿತ!:
ದೇವದಾರು ಮರ ಬಹಳ ವಿಶಿಷ್ಟ ಮರವಾಗಿದೆ. ಈ ಮರಗಳು ೭೦೦ ರಿಂದ ೮೦೦ ವರ್ಷಗಳು ಬದುಕಿರುವ ದಾಖಲೆಯೂ ಇದೆ. ಇದರ ಬೇರುಗಳು ಆಳಕ್ಕೆ ಹೋಗದೆ ಮೇಲ್ಬಾಗದಲ್ಲೇ ದಶದಿಕ್ಕುಗಳಿಗೂ ಹರಡಿಕೊಂಡಿರುತ್ತವೆ. ಅಲ್ಲದೇ ಮರ ಬೀಳದಂತೆ ತಡೆಯುವುದು ಇದೇ ಬೇರುಗಳು. ಈ ಬೇರುಗಳನ್ನು ಕತ್ತರಿಸಿದರೆ ಮಾತ್ರ ಮರಗಳು ಬುಡಸಮೇತವಾಗಿ ಬೀಳುವ ಸಾಧ್ಯತೆ ಇದೆ. ಕಟ್ಟೆ ಕಟ್ಟುವ ನೆಪದಲ್ಲಿ ಇಲ್ಲಿಯೂ ಕೂಡ ಸುತ್ತಲೂ ಹರಡಿಕೊಂಡಿರುವ ಬೇರುಗಳಿಗೆ ಕೊಡಲಿ ಏಟು ಹಾಕಲಾಗಿದ್ದು, ಇನ್ನಷ್ಟು ಬೇರುಗಳಿಗೆ ಕೊಡಲಿ ಹಾಕಲು ಸಿದ್ದತೆ ನಡೆಸಿ ಗುರುತು ಹಾಕಿ ಇಡಲಾಗಿದೆ. ಹೀಗಾಗಿ ಯಾವ ಕ್ಷಣದಲ್ಲಾದರೂ ಈ ಮರಗಳು ಬೀಳುವ ಸಾಧ್ಯತೆ ಇದ್ದು, ಮುಂದೊಂದು ದಿನ ಬಹುದೊಡ್ಡ ಅಪಾಯ ಸಂಭವಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 

ಅಭಿವೃದ್ದಿ ಕಾಮಗಾರಿಗಳಿಗೆ ಯಾವುದೇ ಅಭ್ಯಂತರವಿಲ್ಲ. ಜನಪರವಾದ ಅಭಿವೃದ್ದಿ ಕಾಮಗಾರಿಗಳು ನಡೆದರೆ ಅದನ್ನು ಖಂಡಿತವಾಗಿಯೂ ಸ್ವಾಗತಿಸುತ್ತೇನೆ. ಆದರೆ ಅಭಿವೃದ್ದಿಯ ಹೆಸರಲ್ಲಿ ಮರಗಳ ನಾಶಕ್ಕೆ ಮುಂದಾಗಿರುವುದು ಅಕ್ಷಮ್ಯ. ಇದು ಶತಮಾನಗಳಿಂದಲೂ ಸಾರ್ವಜನಿಕರಿಗೆ ನೆರಳು ನೀಡಿದ ಮರಗಳನ್ನು ಬೇಕಂತಲೇ ನಾಶಗೊಳಿಸುವ ಹುನ್ನಾರ ಅಂತನಿಸುತ್ತಿದೆ. ಮರಗಳಿಗೆ ಕಟ್ಟೆ ಕಟ್ಟುವುದಿದ್ದರೆ ಬೇರುಗಳನ್ನು ಕಡಿಯಬೇಕಂತಿಲ್ಲ. ಹಾಗೆಯೇ ಕಟ್ಟೆ ನಿರ್ಮಿಸಬಹುದು. ಈ ಬಗ್ಗೆ ಪುರಸಭೆ ತಕ್ಷಣವೇ ಎಚ್ಚೆತ್ತುಕೊಂಡು ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಬೇಕು.

           –ಡಾ. ರಶ್ಮಿ ಕುಂದಾಪುರ, ಸಾಮಾಜಿಕ ಕಾರ್ಯಕರ್ತೆ