– ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ಚೀನಾದಲ್ಲಿ ಸಾವಿನ ಕರೆಗಂಟೆ ಭಾರಿಸಿದ ಕೊರೋನಾ ಮಹಾಮಾರಿ ಇದೀಗ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ. ಕೊರೋನಾದಿಂದಾಗಿ ವ್ಯಾಪಾರ ವಹಿವಾಟು ಸಂಪೂರ್ಣ ನೆಲಕಚ್ಚಿ ಹೋದ ಬೆನ್ನಲ್ಲೇ ಕೆಲ ದುಷ್ಕರ್ಮಿಗಳು ಸೋಶೀಯಲ್ ಮೀಡಿಯಾಗಳಲ್ಲಿ ಹರಿದುಬಿಡುತ್ತಿರುವ ಕೆಲವು ಸುಳ್ಳು ಸುದ್ಧಿಗಳಿಂದಾಗಿ ಜನರು ಬೆಚ್ಚಿ ಬೀಳುತ್ತಿದ್ದಾರೆ. ಕ್ಷಣಕ್ಷಣಕ್ಕೂ ಹರಡುತ್ತಿರುವ ಗಾಳಿ ಸುದ್ಧಿಗಳಿಂದಾಗಿ ಸಾರ್ವಜನಿಕರು ಅಕ್ಷರಶಃ ಆತಂಕಕಕ್ಕೀಡಾಗಿದ್ದಾರೆ. ಪರಿಣಾಮವಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಕುಂದಾಪುರದ ಬಹುತೇಕ ಜನನಿಬಿಡ ಪ್ರದೇಶಗಳಲ್ಲಿ ಇದೀಗ ಸ್ವಯಂಘೋಷಿತ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ.
ಕುಂದಾಪುರ ಪಟ್ಟಣ ಸಂಪೂರ್ಣ ಸ್ತಬ್ಧ:
ಶುಕ್ರವಾರವಂತೂ ಕುಂದಾಪುರ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ವ್ಯಾಪಾರ ವಹಿವಾಟುಗಳು, ಆಡಳಿತಾತ್ಮಕ ವ್ಯವಹಾರಗಳು ಇಲ್ಲದಂತಾಗಿದೆ. ನ್ಯಾಯಾಲಯ, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದೆ. ಸದಾ ಜನಜಂಗುಳಿಯಿಂದ ಕಿಕ್ಕಿರಿಯುತ್ತಿದ್ದ ಸರ್ಕಾರಿ ಕಚೇರಿಗಳ ಸಂಕೀರ್ಣ ಮಿನಿ ವಿಧಾನಸೌಧದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ. ಕುಂದಾಪುರದ ಮುಖ್ಯ ರಸ್ತೆಯಲ್ಲಿ ವಾಹನಗಳ ಓಡಾಟವೇ ಕ್ಷೀಣಿಸಿದ್ದು, ನಡೆದಾಡುವ ಪ್ರಯಾಣಿಕರೂ ಬೆರಳೆಣಿಕೆಗೆ ಸಿಗುವಂತಾಗಿತ್ತು. ಪ್ರತಿಯೊಬ್ಬರ ಬಾಯಲ್ಲಿಯೂ ಕೊರೋನಾ ಕೊರೋನಾ ಎನ್ನುವ ಮಾತುಗಳೇ ಗುನುಗುನಿಸುತ್ತಿತ್ತು. ಪೇಟೆಯಲ್ಲಿ ಕಂಡು ಬರುತ್ತಿದ್ದ ಕೆಲವೇ ವ್ಯಕ್ತಿಗಳೂ ಮುಖಕ್ಕೆ ಮಾಸ್ಕ್ ಧರಿಸಿ ಸಂಚರಿಸುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.
ಪೊಲೀಸ್ ಸಿಬ್ಬಂದಿಗಳಲ್ಲೂ ಮನೆಮಾಡಿದ ಆತಂಕ:
ಕಾನೂನು ಸುವ್ಯವಸ್ಥೆ, ಸಂಚಾರ ನಿರ್ವಹಣೆಯ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೂ ಕೊರೋನಾ ಆತಂಕ ಮನೆಮಾಡಿದೆ. ಪ್ರತಿಯೊಬ್ಬ ಪೊಲೀಸರೂ ಮಾಸ್ಕ್ ಧರಿಸಿಯೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಕೊರೋನಾ ಭೀತಿಯಿಂದಲೇ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇನ್ನು ಕಾಲೇಜು ವಿದ್ಯಾರ್ಥಿನಿಯರೂ, ಅನಿವಾರ್ಯವಾಗಿ ಪೇಟೆಯತ್ತ ಮುಖ ಮಾಡುವ ಮಹಿಳೆಯರೂ ಮಾಸ್ಕ್ ಧರಿಸಿ ಇಲ್ಲವೇ ಕರ್ಚೀಫನ್ನು ಮುಖಕ್ಕೆ ಮುಚ್ಚಿಕೊಂಡೇ ಓಡಾಡುತ್ತಿರುವುದು ಸಾಮಾನ್ಯವಾಗಿತ್ತು. ಬಹುತೇಕ ಅಂಗಡಿ ಮುಂಗಟ್ಟುಗಳು ವ್ಯವಹಾರವಿಲ್ಲದೇ ಬಿಕೋ ಎನ್ನುತ್ತಿದ್ದು, ಬಸ್‌ಗಳಲ್ಲಿಯೂ ಪ್ರಯಾಣಿಕರಿಲ್ಲದೇ ಬಿಕೋ ಎನ್ನುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಎಲ್ಲದಕ್ಕೂ ನಿಷಿದ್ಧ :
ಕೊರೋನಾ ಪರಿಣಾಮ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶ ಇಲ್ಲವಾಗಿದೆ. ಮದುವೆ, ಗೃಹ ಪ್ರವೇಶ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಯಮಿತವಾಗಿ ನಡೆಸಲು ಅವಕಾಶ ದೊರೆತರೂ ಜನಜಂಗುಳಿಗೆ, ದುಂದುವೆಚ್ಚಕ್ಕೆ ಕಡಿವಾಣ ಬಿದ್ದಿದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಸಾರಿಗೆ ಸಂಪರ್ಕ ವ್ಯವಸ್ಥೆಗಳ ಮೇಲೆ ನಿಗಾ ವಹಿಸಲಾಗಿದೆ. ಇದೆಲ್ಲದರ ಪರಿಣಾಮ ಇಡೀ ಕರಾವಳಿ ಸಂಪೂರ್ಣ ನಿಶ್ಯಬ್ಧವಾಗಿದೆ.
ವಿದೇಶದಿಂದ ಬರುವ ಎಲ್ಲಾ ಕರಾವಳಿಗರಿಗೆ ನೇರವಾಗಿ ಕೊರೋನಾ ಪರೀಕ್ಷಾ ಕೇಂದ್ರಕ್ಕೆ ಹೋಗಿ ತಪಾಸಣೆ ನಡೆಸಿದ ಬಳಿಕವಷ್ಟೇ ಮನೆಗೆ ಹೋಗುವಂತೆ ಸೂಚಿಸಲಾಗಿದೆ. ಆದರೂ ಕೆಲವರು ನೇರವಾಗಿ ಮನೆಗೆ ಬಂದಾಗ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಅವರನ್ನು ಪರೀಕ್ಷಾ ಕೇಂದ್ರಗಳಿಗೆ ದಾಖಲಿಸಿ ಪರಿಶೀಲಿಸಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ನೆರೆಕರೆಯವರು ವಿದೇಶಗಳಿಂದ ಬಂದ ವ್ಯಕ್ತಿಗಳನ್ನು ಕೊರೋನಾ ಶಂಕಿತರಂತೆ ಕಾಣುತ್ತಿರುವ ಸ್ಥಿತಿಯೂ ನಿರ್ಮಾಣವಾಗಿದೆ. ಆದರೆ ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪಾಸಿಟಿವ್ ಇಲ್ಲದೇ ಇರುವುದು ಇಷ್ಟೆಲ್ಲಾ ಗೊಂದಲಗಳ ನಡುವೆ ಸಮಾಧಾನ ತಂದಿದೆ.
ಇಂದು ಕುಂದಾಪುರ ಸಂತೆ ರದ್ದು:
ಕೋವಿಡ್ ಹರಡದಂತೆ ಜಿಲ್ಲಾಧಿಕಾರಿ ಹಾಕಿರುವ ಸೆಕ್ಷನ್ ೧೪೪(೩) ನಿಂದಾಗಿ ಶನಿವಾರ ಎಪಿಎಂಸಿ ವಠಾರದಲ್ಲಿ ನಡೆಯಬೇಕಿದ್ದ ಕುಂದಾಪುರದ ಸಂತೆಯನ್ನು ರದ್ದುಗೊಳಿಸಲಾಗಿದೆ. ರಾಜ್ಯ ಸರ್ಕಾರ ಕೊರೋನಾ ಮಹಾಮಾರಿ ಹರಡದಂತೆ ಕೈಗೊಂಡ ಮುಂಜಾಗ್ರತಾ ಕ್ರಮವಾಗಿ ಸಂತೆಯನ್ನು ರದ್ದುಗೊಳಿಸಲಾಗಿದೆ. ಈ ಬಾರಿ ಗೊಂದಲಗಳಿಗೆ ಎಡೆ ಮಾಡಿಕೊಡದೇ ಮೊದಲೇ ದೂರದೂರುಗಳಿಂದ ಬರುವಂತಹ ವ್ಯಾಪರಸ್ಥರಿಗೆ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಸೂಚನೆ ನೀಡಿದ್ದಾರೆ. ಎಪಿಎಂಸಿ ಸೂಚನೆಯನ್ನೂ ಮೀರಿ ಶುಕ್ರವಾರ ಬಾಳೆಕಾಯಿ ಇನ್ನಿತರ ವ್ಯಾಪಾರಸ್ಥರು ಎಪಿಎಂಸಿ ಪ್ರಾಂಗಣಕ್ಕೆ ಬಂದಿದ್ದರು. ಆದರೆ ಎಪಿಎಂಸಿ ಗೇಟ್‌ಗೆ ಬೀಗ ಜಡಿದಿದ್ದರಿಂದ ವ್ಯಾಪಾರಸ್ಥರು ಹೊರಗಡೆ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿ ವ್ಯಾಪಾರದಲ್ಲಿ ತೊಡಗಿಕೊಂಡರು.
-ಸುರೇಶ್ ಕಲ್ಲಾಗರ, ಸಿಐಟಿಯು ಮುಖಂಡರು
ಹೋಟೇಲ್, ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ, ಸಾರಿಗೆ ಮುಂತಾದ ಆರ್ಥಿಕ ವ್ಯವಸ್ಥೆಯ ವಲಯಗಳಲ್ಲಿ ಚಟುವಟಿಕೆಗಳು ನಿಂತಿವೆ. ದಿನಗೂಲಿಗಳು, ಅಸಂಘಟಿತ ಕಾರ್ಮಿಕರು, ರಸ್ತೆ ವ್ಯಾಪಾರಿಗಳು, ಸಣ್ಣ ಅಂಗಡಿಕಾರರು ಹಾಗೂ ವಲಸೆ ಕಾರ್ಮಿಕರ ಆದಾಯಗಳು ಕಡಿತಗೊಂಡಿದೆ. ಇದರಿಂದಾಗಿ ಹಸಿವು, ಅಪೌಷ್ಟಿಕತೆಯ ಮೇಲೆ ನೇರ ದುಷ್ಪಾರಿಣಾಮವಾಗುತ್ತಿದೆ. ಕೊರೋನಾದಿಂದ ಉಂಟಾಗುತ್ತಿರುವ ಪ್ರತಿಕೂಲ ಆರ್ಥಿಕ ಪರಿಣಾಮಗಳು ಬಡ ಹಾಗೂ ಸಾಮಾನ್ಯ ಜನರ ಬದುಕಗಳನ್ನು ಬಾಧಿಸಲಾರಂಭಿಸಿದ್ದು, ಇದರ ನಿವಾರಣೆಗಾಗಿ ಕೇಂದ್ರ ಸರ್ಕಾರ ತನ್ನ ದಾಸ್ತಾನಿನಲ್ಲಿ ಇರುವ ಅಪಾರ ಪ್ರಮಾಣದ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಿ ಜನರ ನೆರವಿಗೆ ಧಾವಿಸಬೇಕು.
-ರಾಜೇಶ್ ಕಾವೇರಿ, ಪುರಸಭಾ ಮಾಜಿ ಉಪಾಧ್ಯಕ್ಷರು
ಕೊರೋನಾ ಸೋಕಿಗಿಂತ ಹೆಚ್ಚಾಗಿ ಅದರ ಬಗೆಗೆ ಉಂಟಾಗಿರುವ ಭಯವೇ ಹೆಚ್ಚು ಅಪಾಯಕಾರಿಯಾಗಿದೆ. ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹುಟ್ಟುಹಾಕಿ ಭೀತಿ ಹುಟ್ಟಿಸುವವರ ವಿರುದ್ದ ಕೂಡಲೇ ಕ್ರಮಕೈಗೊಳ್ಳಬೇಕು. ಇವೆಲ್ಲದರ ಮಧ್ಯೆ ವೈದ್ಯಕೀಯ ಹಾಗೂ ಪೊಲೀಸ್ ವಲಯ ಪ್ರಾಣವನ್ನು ಲೆಕ್ಕಿಸದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಪ್ರಸಂಶನೀಯ. ಮೇಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಆದೇಶವಾಗಿ ಜಾರಿಗೊಳಿಸದೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಕೆಲಸವಾಗಬೇಕು. ಸಾರ್ವಜನಿಕ ವಲಯದಲ್ಲಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರು, ಸರ್ಕಾರಿ ಕಚೇರಿಗಳ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಮಾಸ್ಕ್ಗಳನ್ನು ನೀಡಬೇಕು.