ಕುಂದಾಪುರ: ಕಾಂಗ್ರೆಸ್ ನೂತನ ಅಧ್ಯಕ್ಷರ ಪ್ರತಿಜ್ಞಾವಿಧಿ ಕಾರ್ಯಕ್ರಮ ಪ್ರಸಾರ ವೀಕ್ಷಿಸಿ ಸಂಭ್ರಮಿಸಿದ ಕಾರ್ಯಕರ್ತರು

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಾಗೂ ಇತರ ಕಾಂಗ್ರೆಸ್‌ ಮುಂಚೂಣಿಯ ಘಟಕಗಳ ಆಶ್ರಯದಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷ ಅಧಿಕಾರ ಸ್ವೀಕಾರ ಹಾಗೂ ಪ್ರತಿಜ್ಞಾ ವಿಧಿ ಸಮಾರಂಭವನ್ನು ನೇರ ವೀಕ್ಷಣೆ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷದ  ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ಹಾಗೂ ಕೋಟ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ನೇತ್ರತ್ವದಲ್ಲಿ 40 ಕಡೆಗಳಲ್ಲಿ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಹಾಗೂ ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ನೇತ್ರತ್ವದಲ್ಲಿ 45 ಕಡೆಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ವೀಕ್ಷಣೆಗೆ ಡಿಜಿಟಿಲ್‌ ತಂತ್ರಜ್ಞಾನದ ಮೂಲಕ ವ್ಯವಸ್ಥೆ ಮಾಡಲಾಗಿತ್ತು.
ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿನ ಪಕ್ಷದ ಮುಖಂಡರ ಮನೆ ಹಾಗೂ ಸಭಾಭವನಗಳಲ್ಲಿ ವೀಕ್ಷಣೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಹೆಚ್ಚಿನ ಕಡೆಗಳಲ್ಲಿ ಗುರುವಾರ ಬೆಳಿಗ್ಗೆ ಕಾರ್ಯಕ್ರಮ ವೀಕ್ಷಣೆಗೆ ಬಂದವರಿಗೆ ಕೋವಿಡ್‌ ವೈರಸ್‌ನ ಕುರಿತು ತಿಳುವಳಿಕೆ ನೀಡಿ ಸ್ಯಾನಿಟೈಸ್‌ರ್ ಬಳಕೆ, ಮಾಸ್ಕ್‌ ಧಾರಣೆ ಹಾಗೂ ಅಂತರ ಕಾಯ್ದುಕೊಳ್ಳುವ ಕುರಿತು ಸೂಚನೆಯನ್ನು ನೀಡಿ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ಕಾರ್ಯಕ್ರಮ ವೀಕ್ಷಣೆ ಕೇಂದ್ರಗಳಲ್ಲಿ ಡಿಜಿಟಲ್‌ ತಂತ್ರಜ್ಞಾನವನ್ನು ಬಳಕೆ ಮಾಡುವ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ತರಬೇತಿಯನ್ನು ನೀಡಲಾಗಿತ್ತು.
ಕುಂದಾಪುರ, ಬಸ್ರೂರು, ತೆಕ್ಕಟ್ಟೆ, ಕೆದೂರು, ಹಾಲಾಡಿ, ಶಂಕರನಾರಾಯಣ, ಕಂಡ್ಲೂರು, ಅಂಪಾರು, ಕೋಣಿ, ಬೀಜಾಡಿ, ಕೋಟೇಶ್ವರ, ಕಾಳಾವರ, ಬಿದ್ಕಲ್‌ಕಟ್ಟೆ, ಹೆಮ್ಮಾಡಿ, ತಲ್ಲೂರು, ಗುಜ್ಜಾಡಿ, ಕಟ್‌ಬೇಲ್ತೂರು, ಹಟ್ಟಿಯಂಗಡಿ, ಗುಲ್ವಾಡಿ, ಕರ್ಕುಂಜೆ, ಉಳ್ಳೂರು–74, ಚಿತ್ತೂರು, ವಂಡ್ಸೆ, ಕೆರಾಡಿ, ಆಲೂರು, ಹಕ್ಲಾಡಿ ಸೇರಿದಂತೆ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕು ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ವೀಕ್ಷಣಿಗೆ ಕೇಂದ್ರಗಳಿದ್ದವು.
ಬೆಂಗಳೂರಿನಲ್ಲಿ ಸಮಾರಂಭ ಉದ್ಘಾಟನೆಯಾಗುತ್ತಿದ್ದಂತೆ ಇಲ್ಲಿನ ವೀಕ್ಷಣೆ ಕೇಂದ್ರಗಳಲ್ಲಿಯೂ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷರ ಪ್ರತಿಜ್ಞಾ ವಿಧಿ ನಡೆಯುತ್ತಿದ್ದಂತೆ ಇಲ್ಲಿಯೂ ಸೇರಿದ್ದ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸುವ ಮೂಲಕ ಪಕ್ಷದ ಆನ್‌ಲೈನ್‌ ಕಾರ್ಯಕ್ರಮಕ್ಕೆ ಸಾಥ್‌ ನೀಡಿದ್ದಾರೆ.