ಕುಂದಾಪುರ: ಕೇವಲ 4 ವರ್ಷಗಳ ಹಿಂದೆ ಉದ್ಘಾಟನೆಯಾದ ಕುಂದಾಪುರ ಮಿನಿ ವಿಧಾನಸೌಧದ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ಪ್ರಕರಣ ದಾಖಲಾಗಿದೆ.
ಶನಿವಾರ ಈ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿಗಳ ಆಡಳಿತ ಶಾಖೆಯ ಮೇಲ್ಛಾವಣಿಯ ಸಿಮೆಂಟ್ ಸ್ಲ್ಯಾಬ್ ಏಕಾಏಕಿ ಕುಸಿದುಬಿದ್ದು ನೌಕರರೊಬ್ಬರಿಗೆ ಗಾಯವಾಗಿ, ಕಚೇರಿಯ ಪಿಠೋಪಕರಣ ಹಾಗೂ ವಸ್ತುಗಳಿಗೆ ಹಾನಿಯುಂಟಾಗಿತ್ತು.
ಶನಿವಾರ 11 ಗಂಟೆಗೆ ಕಚೇರಿಯಲ್ಲಿ ಗುತ್ತಿಗೆ ನೌಕರ ನಾರಾಯಣ ಬಿಲ್ಲವ ಅವರು ಕರ್ತವ್ಯದಲ್ಲಿದ್ದಾಗ, ಸ್ಲ್ಯಾಬ್ ನ ಸಿಮೆಂಟು ತುಂಡುಗಳಿ ಮೊದಲು ಫ್ಯಾನ್ ಮೇಲೆ ಬಿದ್ದು, ನಂತರ ಅವರ ತಲೆ ಹಾಗೂ ಕೈಗೆ ಬಿದ್ದಿರುವುದರಿಂದ ಗಾಯಗಳಾಗಿವೆ, ಹೆಚ್ಚಿನ ಅಪಾಯ ಸಂಭವಿಸಿರಲಿಲ್ಲ.
ಕಳೆದ ಮಳೆಗಾಲದಲ್ಲಿಯೂ ಮೊದಲ ಮಹಡಿಯ ಪ್ರವೇಶ ದ್ವಾರದ ಬಳಿ ಸ್ಲ್ಯಾಬ್ ನ ಸಿಮೆಂಟ್ ಕುಸಿದಿದ್ದು ನಂತರ ತೇಪೆ ಕಾಮಗಾರಿ ನಡೆಸಲಾಗಿತ್ತು. ಇದೀಗ ಈ ಕಟ್ಟಡದ ಸ್ಲ್ಯಾಬ್ ಹಾಗೂ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ, ಇದರಿಂದ ಇಲ್ಲಿ ಕೆಲಸ ಮಾಡಲು ನೌಕರರು ಹಿಂದೇಟು ಹಾಕುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಟ್ಟಡದ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕುಸಿದ ಸ್ಲ್ಬ್ಯಾಬಿನ ದುರಸ್ತಿ ಕಾರ್ಯ ಭಾನುವಾರ ಆರಂಭವಾಗಿದೆ. ಸೋಮವಾರ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಭೇಟಿ ನೀಡಿ ದುರಸ್ತಿ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.