ಕುಂದಾಪುರ: ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ

ಕುಂದಾಪುರ: ಹಲವು ಸಮಯದ ಬಳಿಕ ತಮ್ಮ ಬಂಧು ಬಳಗವನ್ನು ಸೇರಿಕೊಂಡು ಕೆಲಹೊತ್ತು ಅವರೊಂದಿಗೆ ಕಾಲ ಕಳೆದು ಸೇನಾ ಕ್ಯಾಂಪ್‌ಗೆ ೭೮ ಬಸ್‌ಗಳಲ್ಲಿ ಸಿಆರ್‌ಪಿಎಫ್ ಯೋಧರು ಮರಳುತ್ತಿರುವ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತಿದ್ದ ಉಗ್ರಗಾಮಿಗಳು ದಾಳಿ ನಡೆಸಿ ೪೪ ಯೋಧರನ್ನು ಹತ್ಯೆಗೈದಿದ್ದಾರೆ.

ದೇಶಕ್ಕಾಗಿ ತ್ಯಾಗ ಮಾಡಿದ ಜೀವಕ್ಕೆ ನಾವು ನಮ್ಮ ದೇಶದ ಆಂತರಿಕ ಭದ್ರತೆಯನ್ನು, ಆಂತರಿಕ ಶಾಂತಿ, ಸೌಹಾರ್ದತೆಯನ್ನು, ನಾವು ಸಹೋದರರು ಎಂಬ ಭಾವನೆಯನ್ನು ಭಿತ್ತುವ ಮೂಲಕ ನಮ್ಮನ್ನಗಲಿದ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸೋಣ ಎಂದು ಪತ್ರಕರ್ತ, ಚಿಂತಕ ರಾಮಕೃಷ್ಣ ಹೇರಳೆ ಹೇಳಿದರು.

ಅವರು ಉಗ್ರರ ದಾಳಿಗೆ ಸಾವನ್ನಪ್ಪಿದ ಭಾರತೀಯ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿ ವಿವಿಧ ಸಂಘಟನೆಗಳು ಆಯೋಜಿಸಿದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.

ನರರೂಪದ ರಕ್ಕಸರು ಈ ದೇಶದ ಏಕತೆ, ಸೌಹಾರ್ದತೆ, ಶಾಂತಿ-ಸಾಮರಸ್ಯವನ್ನು ಕದಡಲು ಮಾಡಿರುವ ವ್ಯವಸ್ಥಿತ ಪ್ರಯತ್ನ ಇದಾಗಿದೆ. ನಿರಂತರವಾಗಿ ಕಳೆದ ಐದು ವರ್ಷಗಳಲ್ಲಿ ಇದು ಐದನೇಯ ಕರಾಳ ಘಟನೆ. ೨೦೦೬ ಸೆಪ್ಟೆಂಬರ್ ೧೮ ರಂದು ನಮ್ಮ ಸೈನಿಕರು ನಿದ್ರೆಯಲ್ಲಿರುವಾಗ ಉಗ್ರರು ದಾಳಿ ನಡೆಸಿ ಕೊಂದಿರುವ ಕರಾಳ ಘಟನೆಯ ಕ್ರೌರ್ಯ ನೆನಪು ಮಾಸುವ ಮುನ್ನವೇ ಈ ದುಷ್ಕೃತ್ಯ ನಡೆದಿರುವುದು ಇನ್ನಷ್ಟು ಆತಂಕಕ್ಕೀಡುಮಾಡಿದೆ ಎಂದವರು ಹೇಳಿದರು.

.ಆರೆಸ್ಸೆಸ್ ಮುಖಂಡ ವಾದಿರಾಜ್ ಭಟ್ ಮಾತನಾಡಿ, ಇಡೀ ದೇಶಕ್ಕೋಸ್ಕರ ತಮ್ಮ ಜೀವವನ್ನು ಒತ್ತೆ ಇಟ್ಟು ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರ ಮೇಲೆ ಈ ರೀತಿಯ ದುಷ್ಕೃತ್ಯ ನಡೆಸಿರುವ ಸಂಘಟನೆಗೆ ಪಾಕಿಸ್ತಾನ ನಿರಂತರವಾಗಿ ಕುಮ್ಮಕ್ಕನ್ನು ಕೊಡುತ್ತಿದೆ. ಇಂತಹ ದುಷ್ಕೃತ್ಯವನ್ನು ಇಡೀ ಜಗತ್ತು ಖಂಡಿಸಿದೆ. ೧೯೯೬ ರಲ್ಲಿ ಭಾರತದ ಜೊತೆಗಿನ ಮಾತುಕತೆಯಲ್ಲಿ ಭಾರತ ಪಾಕಿಸ್ತಾನವನ್ನು ಪರಮಾಪ್ತ ದೇಶ ಎಂಬ ರೀತಿಯಲ್ಲಿ ಘೋಷಣೆ ಮಾಡಿತ್ತು. ಆದರೆ ಇಂದು ಭಾರತ ಪಾಕಿಸ್ತಾನವನ್ನು ಪರಮಾಪ್ತ ದೇಶ ಅಲ್ಲ ಎಂಬ ರೀತಿಯಲ್ಲಿ ಇಡೀ ಜಗತ್ತಿಗೆ ಸಾರಿ ಹೇಳಿದೆ. ಉರಿಯಲ್ಲಿ ನಡೆದಂತಹ ಭಯೋತ್ಪಾದನ ದಾಳಿಗೆ ಸೈನ್ಯ ಹೇಗೆ ಉತ್ತರ ಕೊಟ್ಟಿತೋ ಅದೇ ರೀತಿಯ ಉತ್ತರವನ್ನು ಕೊಡಲು ನಮ್ಮ ಸೇನೆ ಸಶಕ್ತವಾಗಿದೆ ಎಂದರು.

ಮೌನ ಪ್ರಾರ್ಥನೆ:

ಪಕ್ಷ ಭೇದ ಮರೆತು ಎಲ್ಲಾ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಯಾಗಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದರು. ಇದಕ್ಕೂ ಮೊದಲು ಶಾಸ್ತ್ರೀ ವೃತ್ತದಿಂದ ಮೊಂಬತ್ತಿ ಹಿಡಿದು ಸಾಗಿದ ಬೃಹತ್ ರಾಲಿ ಮುಖ್ಯರಸ್ತೆಯಲ್ಲಿ ಸಂಚರಿಸಿ ಪಾರಿಜಾತ ಸರ್ಕಲ್ ಸುತ್ತುವರಿದು ಬಳಿಕ ಶಾಸ್ತ್ರೀ ವೃತ್ತದಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಗಿದ್ದು, ಅಗಲಿದ ಹುತಾತ್ಮರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಸಂಘಟಕರಾದ ರಾಜೇಶ್ ಕಾವೇರಿ, ಬಿ.ಕಿಶೋರ್ ಕುಮಾರ್, ಗಣೇಶ್ ಮೆಂಡನ್, ರಾಜೇಶ ವಡೇರಹೋಬಳಿ, ಗಿರೀಶ್ ಜಿಕೆ, ಗಿರೀಶ್ ಕುಂದಾಪುರ, ಸುರೇಶ್ ಕಲ್ಲಾಗರ, ಎಚ್ ನರಸಿಂಹ, ರಾಜಾ ಮಠದಬೆಟ್ಟು, ರಾಜಾ ಬಿಟಿಆರ್, ಯಾಕೂಬ್ ಖಾದರ್ ಗುಲ್ವಾಡಿ, ಉದಯ ಶೆಟ್ಟಿ ಪಡುಕೆರೆ, ದೀಪಕ್ ಬೈಂದೂರು, ವಿನೋದ್ ಕ್ರಾಸ್ತಾ ಮೊದಲಾದವರು ಇದ್ದರು.