ಕುಂದಾಪುರ: ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜನರ ಆಶೋತ್ತರಗಳನ್ನು ಪೂರೈಸುತ್ತದೆ. ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದು ಉತ್ತಮ ಆಡಳಿತ ನೀಡಲಿದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಸಚಿವ ಸ್ಥಾನದ ಆಂಕಾಕ್ಷೆ ಬಗ್ಗೆ ಕುಂದಾಪುರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಶಾಸಕನಾಗಿರುವೆ. ಹಾಗಾಗಿ ಪಕ್ಷದ ಮಾರ್ಗಸೂಚಿಗಳನ್ನು ನಾವು ಒಪ್ಪಬೇಕಿದೆ. ಪಕ್ಷ ಹಾಗೂ ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿರುವೆ ಎಂದರು.
ಕರಾವಳಿ ಜಿಲ್ಲೆಯಲ್ಲಿಯೇ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೆಚ್ಚು ಬಾರಿ ಗೆದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಕುಂದಾಪುರದ ವಾಜುಪೇಯಿ ಎಂತಲೇ ಜನರು ಕರೆಯುತ್ತಾರೆ. ಅಂತೆಯೇ ಹಾಲಾಡಿಯವರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಕಾರ್ಯಕರ್ತರು ಹಾಗೂ ಅಭಿಮಾನಿಗಳದ್ದಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹಾಲಾಡಿ ಅಭಿಮಾನಿಗಳು ಅಭಿಯಾನವನ್ನು ಆರಂಭಿಸಿದ್ದಾರೆ.