ಕುಂದಾಪುರ: ಹಲವು ಕನಸುಗಳನ್ನು ಸಾಕಾರಗೊಳಿಸಲು ಸಿನೆಮಾ ಕ್ಷೇತ್ರಕ್ಕೆ 15 ವರ್ಷಗಳ ಹಿಂದೆ ಪ್ರಶಾಂತ್ ಶೆಟ್ಟಿಯಾಗಿ ಹೋದೆ. ಒಬ್ಬ ಹಳ್ಳಿಗಾಡಿನ ಸಾಮಾನ್ಯ ಹುಡುಗ ಪ್ರಶಾಂತ್ ಶೆಟ್ಟಿ ಇದೀಗ ಸಿನೆಮಾ ಕ್ಷೇತ್ರದಲ್ಲಿ ರಿಷಬ್ ಶೆಟ್ಟಿಯಾಗಿ ನಿಂತಿದ್ದೇನೆ. ಈ ಸಾಧನೆ ಸುಲಭದಲ್ಲಿ ಸಿಗಲಿಲ್ಲ. ಆರಂಭದಲ್ಲಿ ನನ್ನ ಮುಂದೆ ಹಲವು ಸವಾಲುಗಳಿದ್ದವು. ಆದರೆ ಕಳೆದ 3 ವರ್ಷಗಳಿಂದೀಚೆಗೆ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಉಳಿದವರು ಕಂಡಂತೆ ಸಿನೆಮಾದಲ್ಲಿ ಯಶಸ್ಸು ಸಿಕ್ಕರೂ ಜನ ನನ್ನನ್ನು ಗುರುತಿಸಲು ಆರಂಭಿಸಿದ್ದು ಕಿರಿಕ್ ಪಾರ್ಟಿ ಯಶಸ್ಸಿನ ಬಳಿಕ. ಯಶಸ್ಸು ಸಿಗಬೇಕಾದರೆ ಕಷ್ಟಪಡಲೇ ಬೇಕು. ಸಿನೆಮಾ ಇಂಡಸ್ಟ್ರಿಗೆ ಕಾಲಿಟ್ಟ ಆರಂಭದಲ್ಲಿಯೇ ದೊಡ್ಡದೊಂದು ಬಾವಿಗೆ ಬಿದ್ದಿದ್ದೆ. ಆದರೆ ಸತತ ಪರಿಶ್ರಮ, ಛಲ, ಹಠವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನನ್ನೆಲ್ಲಾ ಸಿನೆಮಾಗಳಿಗೆ ನಾನು ಆಡಿ ಬೆಳೆದ ವಾತಾವರಣ, ಸ್ನೇಹವಲಯ, ಈ ಊರೇ ಪ್ರೇರಣೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಅವರು ರವಿವಾರ ಇಲ್ಲಿನ ಭಂಡಾರ್‍ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಕುಂದಪ್ರಭ ಸಹಯೋಗದಲ್ಲಿ ನಡೆದ ಡಾ| ಎ. ರಂಜಿತ್ ಕುಮಾರ್ ಶೆಟ್ಟಿಯವರ `ನೆನಪಿನಾಳದಿಂದ’ ಪುಸ್ತಕವನ್ನು ಜಾದೂಗಾರ ಓಂಗಣೇಶ್ ಉಪ್ಪುಂದ ಅವರ ಸಹಕಾರದೊಂದಿಗೆ ವಿಶಿಷ್ಟ ರೀತಿಯಲ್ಲಿ ಬಿಡುಗಡೆ ಬಿಡುಗಡೆಗೊಳಿಸಿ, ಹುಟ್ಟೂರ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಡಾ. ರಂಜಿತ್ ಶೆಟ್ಟಿಯವರ ಜಯಂತಣ್ಣನಿಗಾಗಿ ಕಾದಂಬರಿ ಒಂದು ಅದ್ಭುತ ಕತೆಯಾಗಿದೆ. ಕನ್ನಡದಲ್ಲಿ ಪ್ರಮುಖವಾಗಿ ವೈದ್ಯರ ಅನುಭವ, ಸವಾಲುಗಳು, ಅವರ ಜೀವನವನ್ನಿಟ್ಟುಕೊಂಡು ಮಾಡಿರುವ ಸಿನೆಮಾಗಳು ಬಹಳ ಕಡಿಮೆ. ಕೆಲವು ಸಿನೆಮಾಗಳಿದ್ದರೂ ಕೂಡ ಸಣ್ಣ ಸಣ್ಣ ಪಾತ್ರಗಳಲ್ಲಿ, ದುರಂತ ಕತೆಗಳಲ್ಲಿ ಬಂದು ಹೋಗಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ವಿದ್ಯಾರ್ಥಿ ಜೀವನದಿಂದ ಅವನ ಕೊನೆವರಿಗಿನ ಜರ್ನಿ ಹೇಳಿದಂತಹ ಯಾವ ಸಿನೆಮಾವೂ ಬಂದಿಲ್ಲ. “ಜಯಂತಣ್ಣನಿಗಾಗಿ” ಪುಸ್ತದಲ್ಲಿ ಓದಿರುವ ವಿಚಾರಗಳನ್ನು ಮೀರಿದ ಇನ್ನಷ್ಟು ವಿಚಾರಗಳು ಸಿನೆಮಾದಲ್ಲಿ ತೋರಿಸಲು ಪ್ರಯತ್ನಿಸುವೆ ಎಂದರು.
ಸನ್ಮಾನದ ಹಿಂದೆ ಎಂದೂ ಹೋಗಿಲ್ಲ:
ನಾನು ಎಂದೂ ಸನ್ಮಾನ, ಪ್ರಶಸ್ತಿಗಳ ಹಿಂದೆ ಬಿದ್ದವನಲ್ಲ. ಈ ಹಿಂದೆ ಹಲವು ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ಆದರೆ ಅಮ್ಮ ಹಾಗೂ ಅಣ್ಣನ ಎದುರು ಈ ಸನ್ಮಾನ ಸ್ವೀಕರಿಸುತ್ತಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲೊಂದು. ನನಗೆ ಮತ್ತು ಅಮ್ಮನಿಗೆ ಡಾ| ರಾಜ್ ಕುಮಾರ್ ಚಿತ್ರಗಳೆಂದರೆ ಬಲು ಪ್ರೀತಿ. ಶಾಲಾ-ಕಾಲೇಜು ದಿನಗಳಲ್ಲಿ ಓದುವುದಕ್ಕಿಂತ ಹೆಚ್ಚಿನ ಆಸಕ್ತಿ ಮಿಮಿಕ್ರಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ತೋರುತ್ತಿದ್ದೆ. ರಾಜ್‍ಕುಮಾರ್ ಅವರ ಶೈಲಿಯಲ್ಲೇ ಅಮ್ಮನೊಂದಿಗೆ ಮಾತನಾಡುತ್ತಿದ್ದೆ ಎಂದರು.
ಓದುವುದರಲ್ಲಿ ಆಸಕ್ತಿ ಬೆಳೆಸಿಕೊಳ್ಳದ ನಾನು ಶಾಲಾ ಕಾಲೇಜು ದಿನಗಳಲ್ಲಿ `ಕಿರಿಕ್’ ವಿದ್ಯಾರ್ಥಿಯಾಗಿದ್ದೆ. ಒಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕನ ಪಾತ್ರ ಬಹಳ ಮುಖ್ಯವಾಗುತ್ತೆ. ಋಣಾತ್ಮಕ ವಿಚಾರಗಳಿಗೆ ಬಳಕೆಯಾಗುತ್ತಿದ್ದ ನನ್ನ ಶಕ್ತಿ, ಸಾಮಥ್ರ್ಯವನ್ನು ಧನಾತ್ಮಕವಾಗಿ ಬಳಸುವಂತೆ ಪ್ರೇರೇಪಿಸಿದ ವಸಂತ್ ಬನ್ನಾಡಿ, ಸುಜಯೀಂದ್ರ ಹಂದೆ, ದೋಮ ಚಂದ್ರಶೇಖರ್ ಅವರಂತಹ ಗುರುಗಳಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು ಎನ್ನುವುದಾಗಿ ರಿಷಬ್ ತನ್ನ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡರು.
ಅಭಿನಂದನಾ ಮಾತುಗಳನ್ನಾಡಿದ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ವೈದ್ಯರೊಬ್ಬರು ತಮ್ಮ ವೃತ್ತಿಜೀವನದಲ್ಲಾದ ಅನೇಕ ಮಹಾನ್ ಸಂಗತಿಗಳನ್ನು ಬರಹದ ರೂಪದಲ್ಲಿ ತೆರೆದಿಡಲು ವಿಶೇಷವಾದ ಶಕ್ತಿ ಬೇಕು ಎಂದ ಅವರು, ಪುಸ್ತಕದಲ್ಲಿರುವ ಕೆಲವೊಂದು ಸ್ವಾರಸ್ಯಕರ ವಿಚಾರಗಳನ್ನು ಹೇಳಿದರು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಜಯಂತಣ್ಣನಿಗಾಗಿ ಕಾದಂಬರಿಯ ದ್ವಿತೀಯ ಮುದ್ರಣವನ್ನು ಕೂಡ ಅನಾವರಣಗೊಳಿಸಲಾಯಿತು.
ಕುಂದಪ್ರಭದ ಸಂಪಾದಕ ಯು.ಎಸ್. ಶೆಣೈ ಸ್ವಾಗತಿಸಿದರು. ಡಾ| ರಂಜಿತ್ ಕುಮಾರ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.