ಕುಂದಾಪುರದಲ್ಲಿ ಜು.13 ರಿಂದ ನಡೆಯಲಿದೆ ವರ್ತಕರ ಸ್ವಯಂಪ್ರೇರಿತ ಬಂದ್: ಯಾವುದಿದೆ? ಯಾವುದಿಲ್ಲ?

ಕುಂದಾಪುರ: ತಾಲೂಕಿನಲ್ಲಿ ಕೋವಿಡ್-19  ವೈರಸ್ ಸಾಮುದಾಯಿಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವರ್ತಕರು ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಜು.13 ರಿಂದ ಜು.31 ತನಕ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್ಲಾ ಅಂಗಡಿಗಳು ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಯಂ ಪ್ರೇರಿತ ಬಂದ್ ನಡೆಸಲಾಗುವುದು ಎಂದು ಕುಂದಾಪುರದ ಸಮಾನ ಮನಸ್ಕ ವರ್ತಕರು ತಿಳಿಸಿದ್ದಾರೆ.

ಈ ಕುರಿತು ನಗರದ ಖಾಸಗಿ ಹೋಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವರ್ತಕ ರಾಧಕೃಷ್ಣ ಅವರು, ಮೆಡಿಕಲ್, ಹಾಲು, ಹೋಟೆಲ್, ಬಾರ್ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಿದ್ದು, ಆ ಬಳಿಕ ಸ್ವಯಂ ಪ್ರೇರಿತ ಬಂದ್ ನಡೆಸಲಾಗುತ್ತದೆ ಎಂದರು.

ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 15೦ಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕ ವ್ಯಾಪಾರಸ್ಥರು ಈ ಬಗ್ಗೆ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದೇವೆ. ಕಳೆದ ನಾಲ್ಕು ದಿನಗಳಿಂದ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಮನವಿ ಮಾಡಿದ್ದೇವೆ. ಸ್ವಯಂ ಪ್ರೇರಿತ ಬಂದ್‌ಗೆ ಎಲ್ಲರ ಬೆಂಬಲ ಸಿಕ್ಕಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ತಕ ಶ್ರೀಧರ್ ಪಿ.ಎಸ್, ಈ ಬಗ್ಗೆ ಎಲ್ಲ ವರ್ತಕರಿಂದ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಗ್ರಾಹಕರು ಕೂಡ ಸಹಕರಿಸಬೇಕು. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತದೊಂದಿಗೆ ನಮ್ಮ ಹೊಣೆಗಾರಿಕೆಯೂ ಇದೆ. ಸ್ವಯಂ ಪ್ರೇರಿತ ಬಂದ ಕುರಿತಂತೆ ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭ ಜುವೆಲ್ಲರ್‍ಸ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಶೇಟ್, ವರ್ತಕರಾದ ವಿಜಯ ಕುಮಾರ್ ಶೆಟ್ಟಿ, ಹುಸೇನ್ ಹೈಕಾಡಿ, ಅಬು ಮಹಮ್ಮದ್, ತಬ್ರೈಜ್, ಸಂತೋಷ್, ಸತೀಶ್ ಹೆಗ್ಡೆ, ಜಸ್ವಂತ್ ಸಿಂಗ್, ಸುರೇಂದ್ರ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

ಯಾವುದಿದೆ? ಯಾವುದಿಲ್ಲ?
ಎಲ್ಲ ದಿನಸಿ, ತರಕಾರಿ, ಹಣ್ಣು, ಎಲೆಕ್ಟ್ರಿಕಲ್ ಶೋ ರೂಂ, ಮೊಬಲ್, ಬಟ್ಟೆ, ಬೇಕರಿ, ಜೂಸ್ ಪಾರ್ಲರ್, ಸೆಲೂನ್, ಬೂಟಿ ಪಾರ್ಲರ್‌ಗಳು, ಚಿನ್ನದ ಮಳಿಗೆಗಳು ಸೇರಿದಂತೆ ಎಲ್ಲ ಅಂಗಡಿಗಳು ಜುಲೈ ಅಂತ್ಯದವರೆಗೆ ಮಧ್ಯಾಹ್ನ 2 ಗಂಟೆಯ ಬಳಿಕ ಬಂದ್ ಇರಲಿದೆ. ತುರ್ತು ಅಗತ್ಯತೆಯಾದ ಮೆಡಿಕಲ್, ಅಧಿಕೃತ ಹಾಲು ಮಾರಾಟ ಅಂಗಡಿ, ಎಲ್ಲ ಹೋಟೆಲ್‌ಗಳು ಎಂದಿನಂತೆ ತೆರೆಯಲಿದೆ.