ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಶೈಕ್ಷಣಿಕ ವರ್ಷ 2018-19ನೇ ಸಾಲಿನ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಆಡಳಿತಾಧಿಕಾರಿ ಡಾ.ಹೆಚ್.ಶಾಂತಾರಾಮ್ ಮಾತನಾಡಿ, ಪ್ರತಿಭೆ ಪ್ರತಿ ವ್ಯಕ್ತಿಯಲ್ಲೂ ಇರುತ್ತದೆ. ಅರಿತುಕೊಳ್ಳುವ ಪ್ರಯತ್ನ ಮತ್ತು ಮನಸ್ಸು ಮಾಡಬೇಕು. ಪೂರಕವಾಗಿ ಒಳ್ಳೆಯ ಸಾಧನೆ ಸಾಧ್ಯವಾಗುತ್ತದೆ. ಶಿಕ್ಷಣವೆಂದರೆ ಕೇವಲ ಪಾಠವಲ್ಲ. ಇದರಲ್ಲಿ ವ್ಯಕ್ತಿತ್ವ ವಿಕಸನವು ಒಂದು ಭಾಗವಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತದೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಪಾಠಕ್ಕೆ ಪೂರಕವಾಗಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ತನ್ನವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಇದು ವಿದ್ಯಾರ್ಥಿಯ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಜಿ.ವಿ.ಅಶೋಕ್ ಮಾತನಾಡಿ ಯುವಪೀಳಿಗೆ ಯಾವುದೇ ಕ್ರೀಡೆಯಲ್ಲಾಗಲಿ ತನ್ನನ್ನು ತಾನೂ ತೊಡಗಿಸಿಕೊಂಡು ಸತತ ಪ್ರಯತ್ನ ಕೈಗೊಂಡಾಗ ಉತ್ತಮ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಇನ್ನೋರ್ವ ಅತಿಥಿ ನಾವುಂದದ ರಿಚರ್ಡ್ ಅಲ್ಮೆಡಾ ಪದವಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಎಸ್.ನಾರಾಯಣರಾವ್ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಕಲಿತದ್ದು ಜೀವನವಿಡಿ ನಮ್ಮೊಂದಿಗಿರುತ್ತದೆ. ಹಾಗಾಗಿ ನಿಮ್ಮ ಗುರಿ ಓದಿನತ್ತ ಸಾಧನೆ ಮಾಡುವತ್ತ ಇರಬೇಕು. ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಮತ್ತು ಸಂಸ್ಥೆಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಾಮಚಂದ್ರ ಉಪಸ್ಥಿತರಿದ್ದರು.
ದೈಹಿಕ ನಿರ್ದೇಶಕ ಶಂಕರನಾರಾಯಣ ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಅಧ್ಯಾಪಕರಾದ ಹರ್ಷಿತಾ ಮತ್ತು ಸ್ನೇಹ ದತ್ತಿ ನಿಧಿ ಮತ್ತು ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿಯರಾದ ಕೀರ್ತಿಕಾರ್ಯಕ್ರಮ ನಿರ್ವಹಿಸಿ, ಮೇಘಣಾ ಪ್ರಭು ವಂದಿಸಿದರು.