ಕುಂದಾಪುರ: ಸುಖಾಸುಮ್ಮನೆ ರಸ್ತೆಗೆ ಬಂದವರ 41 ದ್ವಿಚಕ್ರ ವಾಹನ, 5 ಕಾರುಗಳು ವಶಕ್ಕೆ:

ಕುಂದಾಪುರ: ಕೊರೋನಾ ತಡೆಗಟ್ಟುವ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ಜನರು ಸುಖಾಸುಮ್ಮನೆ ರಸ್ತೆಗಿಳಿಯುವುದು ನಿಂತಿಲ್ಲ. ಇದೀಗ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ನೋಟಿಸ್ ನೀಡುವ ಪ್ರಕ್ರಿಯೆ ನಡೆಸುತ್ತಿದ್ದಾರೆ.

ಕುಂದಾಪುರ ಪೊಲೀಸ್ ಉಪವಿಭಾಗದ ಎಲ್ಲಾ ಠಾಣೆಗಳಲ್ಲೂ ಪೊಲೀಸರು ವಾಹನ ವಶಕ್ಕೆ ಪಡೆಯುವ ಕಾರ್ಯ ನಡೆಸುತ್ತಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪಿಎಸ್‌ಐ ಹರೀಶ್ ಆರ್. ನಾಯ್ಕ್ ನೇತೃತ್ವದ ತಂಡ ಕಳೆದ ಮೂರು ದಿನಗಳಿಂದ ಠಾಣಾ ವ್ಯಾಪ್ತಿಯ ವಿವಿದೆಡೆ ಕಾರ್ಯಾಚರಣೆ ನಡೆಸುತ್ತಿದ್ದು ಒಟ್ಟು ೧೩ ದ್ವಿಚಕ್ರ ವಾಹನಗಳು, ಒಂದು ಇನ್ನೋವಾ ಕಾರು ಹಾಗೂ ಒಂದು ಸ್ವಿಫ್ಟ್ ಕಾರು ವಶಕ್ಕೆ ಪಡೆದಿದೆ.

ಇನ್ನು ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಎಸ್‌ಐ ಶ್ರೀಧರ್ ನಾಯ್ಕ್ ನೇತೃತ್ವದಲ್ಲಿ ೧೮ ದ್ವಿಚಕ್ರ ವಾಹನಗಳು ಮತ್ತು ೨ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್‌ಐ ರಾಜ್‌ಕುಮಾರ್ ನೇತೃತ್ವದ ಪೊಲೀಸರ ತಂಡವೂ ಕೆಲ ವಾಹನಗಳನ್ನು ವಶಕ್ಕೆ ಪಡೆದಿದೆ. ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು ೪೧ ದ್ವಿಚಕ್ರ ವಾಹನಗಳು ಹಾಗೂ ೫ ಕಾರುಗಳನ್ನು ವಿವಿಧ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇನ್ನು ವಶಕ್ಕೆ ಪಡೆದ ವಾಹನಗಳ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತಿದೆ. ಲಾಕ್ ಡೌನ್ ಮುಗಿಯುವವರೆಗೆ ವಾಹನಗಳು ಪೊಲೀಸರ ಸುಪರ್ಧಿಯಲ್ಲಿಯೇ ಇರಲಿದ್ದು, ಬಳಿಕ ವಾಹನದ ಮಾಲಿಕರು ದಂಡ ಕಟ್ಟಿ ವಾಹನವನ್ನು ಪಡೆಯಬಹುದಾಗಿದೆ.

ಲಾಕ್ ಡೌನ್ ಆದೇಶದ ಹಿನ್ನೆಲೆ ಬೆಳಿಗ್ಗೆ ೧೧ ಗಂಟೆಯವರೆಗೆ ಮಾತ್ರ ದಿನಸಿ ಹಾಗೂ ತರಕಾರಿಗಳನ್ನು ಖರೀದಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು. ಆ ಬಳಿಕ ಮೆಡಿಕಲ್ ಹಾಗೂ ಆಸ್ಪತ್ರೆಗಳಿಗೆ ಮಾತ್ರ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಯುವಕರು ಬೀಚ್ ಹಾಗೂ ಜಾಲಿ ರೈಡ್ ನಡೆಸುತ್ತಿರುವುದು ವಾಹನ ತಪಾಸಣೆಯ ವೇಳೆ ಬಟಾಬಯಲಾಗಿದೆ. ಹೀಗೆ ಅನಗತ್ಯ ರಸ್ತೆಗಿಳಿದವರ ಬೈಕ್ ಹಾಗೂ ಕಾರುಗಳನ್ನು ವಶಕ್ಕೆ ಪಡೆಯುವ ಮೂಲಕ ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.