ಉಡುಪಿ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡೂರು ಪೇಟೆಯಲ್ಲಿ ಕಟಿಂಗ್ ಶಾಪ್‌ನಲ್ಲಿ ನಡೆದ ಘಟನೆಯನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಪ್ರಚೋದನೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಶಾಂಕ ಭಂಡಾರಿ (30) ಮತ್ತು ಪ್ರಮೋದ ಡಿಸೋಜ (25) ಬಂಧಿತ ಆರೋಪಿಗಳು.
ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಕಂಡೂರು ಪೇಟೆಯಲ್ಲಿರುವ ಕಟಿಂಗ್ ಶಾಪ್‌ನಲ್ಲಿ ಹೇಳಿದ ವಿಷಯವನ್ನು ಕೆಲವರು ವಿಡಿಯೋ ಮಾಡಿ, ಸಾರ್ವಜನಿಕರನ್ನು ಪ್ರಚೋದನೆಗೊಳಿಸಿ ಗಲಾಟೆ ಸೃಷ್ಟಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಬಾಲಕನ ತಂದೆ ನೀಡಿದ ದೂರಿನಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನೊಂದೆಡೆ, ಈ ವಿಚಾರಕ್ಕೆ ಸಂಬಂಧಿಸಿ ಕಟಿಂಗ್ ಶಾಪ್ ಎದುರು 20-30 ಜನರು ಗುಂಪುಗೂಡಿ ಬೆದರಿಕೆ ಹಾಕಿರುವ ಬಗ್ಗೆ ಶಾಪ್ ಮಾಲೀಕ ಶಶಾಂಕ ಭಂಡಾರಿ ನೀಡಿದ ದೂರಿನ ಮೇರೆಗೆ ಮತ್ತೊಂದು ಪ್ರಕರಣವೂ ದಾಖಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 20-30 ಜನರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
















