ಉಡುಪಿ: ಮುಸುಕುಧಾರಿಗಳಿಬ್ಬರು ಬಾಗಿಲು ಮುರಿದು ಮನೆಗೆ ನುಗ್ಗಲು ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ.
ಭಾನುವಾರ ಮುಂಜಾನೆ ಮಾರಕಾಸ್ತ್ರದೊಂದಿಗೆ ಬಂದಿದ್ದ ಇಬ್ಬರು ಕಳ್ಳರು ಕೋಟೇಶ್ವರದ ಮ್ಯಾಕ್ಸಿಮಾ ವಿಲ್ಲಾ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಧ್ವಂಸಗೊಳಿಸಿ ಬಳಿಕ ಬಾಗಿಲಿನ ನೆಟ್ ಮುರಿದು ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಬಾಗಿಲು ಮುರಿಯುವ ಸದ್ದು ಕೇಳಿ ಮನೆಯ ಮಾಲಕಿ ಎಚ್ಚರಗೊಂಡಿದ್ದಾರೆ.
ಮಹಿಳೆಯ ಬೊಬ್ಬೆ ಮತ್ತು ಫೋನ್ ಕರೆ ಮಾಡುತ್ತಿರುವುದು ಗಮನಿಸಿದ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರದ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ.












