ಕುಂದಾಪುರ (ಉಡುಪಿ): ಯಕ್ಷಗಾನದ ತೆಂಕು, ಬಡಗು ತಿಟ್ಟುಗಳ ಪ್ರಸಿದ್ಧ ಸ್ತ್ರೀವೇಷಧಾರಿ ಕೋಡಿ ಕೃಷ್ಣ (ಕುಷ್ಟ) ಗಾಣಿಗ (78) ಅವರು ತಾಲ್ಲೂಕಿನ ಕೋಡಿಯಲ್ಲಿರುವ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಕೋಡಿ ಕುಷ್ಟ ಗಾಣಿಗ ಅವರು ಅಮೃತೇಶ್ವರೀ, ಮಾರಣಕಟ್ಟೆ, ಕಲಾವಿಹಾರ, ರಾಜರಾಜೇಶ್ವರಿ ಮೇಳ ಹಾಗೂ ಕಟೀಲು ಮೇಳದಲ್ಲಿ ಮೂರುವರೆ ದಶಕಗಳ ಕಾಲ ತಿರುಗಾಟವನ್ನು ಮಾಡಿದ್ದರು.
ಹೆರಂಜಾಲು ವೆಂಕಟರಮಣ ಗಾಣಿಗರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಹಾಗೂ ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯಭ್ಯಾಸವನ್ನು ಕಲಿತಿದ್ದ ಅವರು, ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದ್ರೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದರು.












