ಉಡುಪಿ: ಕಡಲಾಮೆಗಳನ್ನು ಸಂರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಕುಂದಾಪುರದ ಕೋಡಿಯಲ್ಲಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು. ಕುಂದಾಪುರ, ಕೋಡಿಯಲ್ಲಿ ಕಡಲಾಮೆ ಮೊಟ್ಟೆ ಇಡುವ ಪ್ರದೇಶಕ್ಕೆ ಭೇಟಿ ನೀಡಿದ್ದೇವೆ. ಕೆಲವು ಕಡಲಾಮೆಗಳು ದಡಕ್ಕೆ ಬಂದಾಗ ಗಾಯಗೊಂಡಿರುತ್ತವೆ. ಹಾಗಾಗಿ ಇವುಗಳಿಗೆ ಚಿಕಿತ್ಸೆ ನೀಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಕುಂದಾಪುರ, ಪಂಚಗಂಗಾವಳಿ ನದಿಯ ನೂರು ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಇರುವ ಕಾಂಡ್ಲವನವನ್ನು ಪಾರಂಪರಿಕ ಜೀವ ವೈವಿಧ್ಯತೆ ತಾಣವಾಗಿ ಘೋಷಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಹಾಗೆ ಕರಾವಳಿ ಜಿಲ್ಲೆಗಳಲ್ಲಿ ಕಾಂಡ್ಲವನ ಯೋಜನೆಯನ್ನು ಸಮುದ್ರತೀರದಲ್ಲಿ ಹಂತಹಂತವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ. ಆಯಾ ಗ್ರಾಪಂಗಳಲ್ಲಿ ಜೀವ ವೈವಿಧ್ಯ ಸಮಿತಿ ರಚನೆಯಾಗಬೇಕು ಎಂದು ಹೇಳಿದರು.
ಅವನತಿ ಅಂಚಿನಲ್ಲಿರುವ ಸಿಂಗಳೀಕ ಸಂತತಿಯ ಸಂರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಗೇರುಸೊಪ್ಪ ಶರಾವತಿ ವನ್ಯಜೀವಿ ಅಭಯರಣ್ಯ ಸಿಂಗಳೀಕ ಸಂರಕ್ಷಿತ ಪ್ರದೇಶವನ್ನಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ ಎಂದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಡಲಶಾಸ್ತ್ರ ತಜ್ಞ ಡಾ. ಪ್ರಕಾಶ್ ಮೇಸ್ತ, ಸಿಆರ್ಝಡ್ ಡಿಎಫ್ಒ ದಿನೇಶ್ ಕುಮಾರ್, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿಗಳಾದ ಲೋಹಿತ್, ಕ್ಲಿಫರ್ಡ್ ಲೋಬೊ, ಪ್ರಶಾಂತ್ ಇದ್ದರು.












