ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (MCA) ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ನವೀನ ಚಿಂತನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ನೂತನ ವೇದಿಕೆಯಾದ “ಇನ್ಫೋ ಸ್ಪಾರ್ಕ್” ಅನ್ನು ಉದ್ಘಾಟಿಸಿತು.
ವಿಭಾಗದ ಮುಖ್ಯಸ್ಥರಾದ ಡಾ. ಟಿ. ನಂದಿನಿ ಅವರು ಸ್ವಾಗತಿಸಿ, “ಇನ್ಫೋ ಸ್ಪಾರ್ಕ್” ವೇದಿಕೆಯು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ವೃದ್ಧಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಇದರ ಧ್ಯೇಯೋದ್ದೇಶವನ್ನು ಅರಿತು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು.
ಈ ಉಪಕ್ರಮದಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಸಲುವಾಗಿ “ಬೈನರಿ ಕ್ರಾಫ್ಟರ್ಸ್” (ಕೋಡಿಂಗ್, ಡಿಬಗ್ಗಿಂಗ್ ಹಾಗೂ ಹ್ಯಾಕಥಾನ್ ಮುಂತಾದ ಐಟಿ ಚಟುವಟಿಕೆಗಳು), “ಕಮ್ಯುನಿಟಿ ಕ್ಯಾಟಲಿಸ್ಟ್ಸ್” (ಆರೋಗ್ಯ ಹಾಗೂ ಸಾಮಾಜಿಕ ಜಾಗೃತಿ ಅಭಿಯಾನಗಳಂತಹ ಸಮುದಾಯಮುಖಿ ಕಾರ್ಯಕ್ರಮಗಳು) ಮತ್ತು “ಬಿಜ್ ಬೈಟ್ಸ್” (ಉದ್ಯಮಶೀಲತೆ ಹಾಗೂ ನಿರ್ವಹಣಾ ಕೌಶಲ್ಯ ಆಧಾರಿತ ಚಟುವಟಿಕೆಗಳು) ಎಂಬ ಸಂಘಗಳನ್ನು ಪ್ರಾರಂಭಿಸಲಾಗಿದೆ.
ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಳು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಪ್ರಿಯ ಮತ್ತು ಕಿಶನ್ ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
















