ಕುಂದಾಪುರ: ಕೋವಿಡ್ ವಿರುದ್ಧದ ಸಮರದಲ್ಲಿ ಪತ್ರಕರ್ತರು ವಹಿಸಿದ ಪಾತ್ರ ಬಹಳ ಮಹತ್ತರವಾದದ್ದು. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ಶ್ರಮ ಅಪಾರ’ ಎಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಹೇಳಿದ್ದಾರೆ. ಕುಂದಾಪುರದ ಸರ್ಕಾರಿ ಅಯುಷ್ ಆಸ್ಪತ್ರೆಯಲ್ಲಿ ಪತ್ರಕರ್ತರ ರೋಗ ನಿರೋಧಕ ಶಕ್ತಿ ವೃದ್ಧಿಗೆ ನೀಡಲಾದ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಕೊರೋನಾದ ಪ್ರಭಾವ ಇನ್ನಷ್ಟು ಸಮಯ ಮುಂದುವರಿಯಲಿದೆ. ಲಾಕ್ ಡೌನ್ ಸಡಿಲಿಕೆಯ ಬಳಿಕ ಜನಸಾಮಾನ್ಯರು ಕೋವಿಡ್ ಕುರಿತು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಮತ್ತು ಆಗಾಗ ಸ್ಯಾನಿಟೈಝರ್ ಬಳಕೆ ಕೋವಿಡ್ ತಡೆಗಟ್ಟುವಲ್ಲಿ ಬಹಳ ಸಹಕಾರಿ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಚಿಕಿತ್ಸೆ ನೀಡಿದ ಕಾರಣ ಕೋವಿಡ್ ರೋಗಿಗಳಲ್ಲಿ ಬಹುತೇಕರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನುಳಿದ ರೋಗಿಗಳು ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಡಾ. ನಾಗೇಶ್ ಹೇಳಿದರು. ಆಯುರ್ವೇದ ಔಷಧ ಪದ್ದತಿಯಲ್ಲಿ ಹೆಚ್ಚಿನ ಸಂಶೋಧನೆಗಳು ಅಗತ್ಯವಿದೆ, ಪ್ರತಿಯೊಬ್ಬರೂ ರೋಗ ನಿರೋಧ ಶಕ್ತಿ ವರ್ಧನೆಗೆ ಸೂಕ್ತ ಆಹಾರ ಪದ್ದತಿಯನ್ನು ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಶೋಕ ಆಚಾರ್ಯ ರೋಗ ನಿರೋಧಕ ಶಕ್ತಿ ವೃದ್ಧಿಸಲು ಪತ್ರಕರ್ತರಿಗೆ ನೀಡಲಾದ ಸಾಮಗ್ರಿಗಳ ಕುರಿತು ವಿವರಣೆ ನೀಡಿದರು. ಸರ್ಕಾರ ಕುಂದಾಪುರದಲ್ಲಿ ನಿರ್ಮಿಸಿರುವ ಆಯುಷ್ ಆಸ್ಪತ್ರೆಯ ಪ್ರಯೋಜನವನ್ನು ಕುಂದಾಪುರದ ಜನರು ಹೆಚ್ಚೆಚ್ಚು ಪಡೆಯುವಂತಾಗಬೇಕು ಎಂದು ಹೇಳಿದರು.
ಕುಂದಾಪುರದ ಆಯುಷ್ ಆಸ್ಪತ್ರೆಯಲ್ಲಿ ನಡೆದ ಈ ಸಾಂಕೇತಿಕ ಸಮಾರಂಭದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ, ಹಿರಿಯ ಪತ್ರಕರ್ತರಾದ ಕೆ.ಜಿ. ವೈದ್ಯ ಸೇರಿದಂತೆ ಹಲವಾರು ಪತ್ರಕರ್ತರು, ಆಯುಷ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.