ಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ ಕರ್ಣಾಟಕ ಬ್ಯಾಂಕ್ ಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ದಂಪತಿ

ಉಡುಪಿ: ಸಿದ್ದಾಪುರದ ಗೇರುಬೀಜ ಕಾರ್ಖಾನೆಯ ಮಾಲೀಕ ಹಾಗೂ ಆತನ ಪತ್ನಿ ಸೇರಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕರ್ಣಾಟಕ ಬ್ಯಾಂಕ್ ಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿದ್ದಾಪುರ ಗಜಾನನಾ ಕ್ಯಾಶೂ ಇಂಡಸ್ಟ್ರೀಸ್ ಮಾಲೀಕ ರಾಘವೇಂದ್ರ ಹೆಮ್ಮಣ್ಣ ಮತ್ತು ಆತನ ಪತ್ನಿ ಆಶಾಕಿರಣ ಹೆಮ್ಮಣ್ಣ ಬ್ಯಾಂಕ್ ಗೆ ವಂಚನೆ ಮಾಡಿದ ದಂಪತಿ. ಇವರಿಬ್ಬರು ಹೆಮ್ಸ್ ಪುಡ್ಸ್ ಪ್ರೈ ಲಿಮಿಟೆಡ್ ಕಂಪೆನಿಯನ್ನು ತೆರೆದು ವಾರ್ಷಿಕ 10,90,60,855 ವಾಹಿವಾಟು ಆಗುತ್ತಿದೆಂದು ನಕಲಿ ಆಡಿಟ್ ಅನ್ನು ಬ್ಯಾಂಕ್ ಗೆ ಸಲ್ಲಿಸಿ ಸಾಲ ಪಡೆದಿದ್ದರು.

ಇವರು ಸಲ್ಲಿಸಿದ ಆಡಿಟ್ ಆಧರಿಸಿ ಬ್ಯಾಂಕ್ ಆರೋಪಿಗಳಿಗೆ ಒವರ್ ಡ್ರಾಪ್ಟ್ ಸಾಲವಾಗಿ 3.75 ಕೋಟಿ ರೂ., ಯಂತ್ರೋಪಕರಣಗಳ ಖರೀದಿಗಾಗಿ 2.70 ಕೋಟಿ ರೂ. ಮತ್ತು ಕಟ್ಟಡ ನಿರ್ಮಾಣಕ್ಕಾಗಿ 25 ಲಕ್ಷ ರೂ. ಸಾಲವನ್ನು ಬೇರೆ ಬೇರೆ ದಿನಾಂಕಗಳದ್ದು ನೀಡಿದೆ.

ಆರೋಪಿಗಳು ಸಾಲದ ಕಂತನ್ನು ಸರಿಯಾಗಿ ಪಾವತಿ ಮಾಡದಿದ್ದಾಗ ಬ್ಯಾಂಕ್ ನ ಸಿಬ್ಬಂದಿ ಆರೋಪಿಗಳ ಕಂಪೆನಿಯ ವೆಬ್ ಸೈಟ್‌ ಪರಿಶೀಲನೆ ನಡೆಸಿದ್ದು, ಆಗ ಕಂಪೆನಿಯ ವಾರ್ಷಿಕ ವಹಿವಾಟು ಕೇವಲ 15,08,432 ರೂ. ಗೊತ್ತಾಗಿದೆ. ಅಲ್ಲದೆ, ಆರೋಪಿಗಳು ಬ್ಯಾಂಕ್ ಗೆ ಮೋಸ ಮಾಡುವ ಉದ್ದೇಶದಿಂದ ಒಂದೇ ಕಂಪೆನಿ ಹೆಸರಿನಲ್ಲಿ ಹೆಚ್ಚು ಆದಾಯ ಮತ್ತು ಸೇಲ್ಸ್ ಅನ್ನು ತೋರಿಸುವ ಎರಡು ಆಡಿಟ್ ಗಳನ್ನು ಸಿದ್ಧಪಡಿಸಿದ್ದಾರೆ.

ಆರೋಪಿಗಳು ಸದ್ಯ ಒಟ್ಟು 6,74,77,414.31 ರೂ. ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳು 5.27 ಕೋಟಿ ರೂ. ಕಂಪೆನಿಯ ದಾಸ್ತಾನು ಇದೆಯೆಂದು ತೋರಿಸಿದ್ದರು. ಆದರೆ ದಾಸ್ತಾನು ಕೊಠಡಿ ಪರಿಶೀಲಿಸಿದಾಗ ಕಂಪೆನಿಯ ಯಾವುದೇ ಉತ್ಪನಗಳು ದಾಸ್ತಾನು ಇರಲಿಲ್ಲ.

ಈ ಬಗ್ಗೆ ಕರ್ಣಾಟಕ ಬ್ಯಾಂಕ್ ಸಿದ್ದಾಪುರ ಶಾಖೆಯ ಪ್ರಬಂಧಕ ಶ್ರೀನಿವಾಸ ಶೆಣೈ ನೀಡಿದ ದೂರಿನಂತೆ ರಾಘವೇಂದ್ರ ಹೆಮ್ಮಣ್ಣ ದಂಪತಿಗಳ ವಿರುದ್ಧ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.