ಕೋಟ: ಸಾಹಿತ್ಯ ಸಮ್ಮೇಳನದ ಸಂದರ್ಭ ಕುಂದಾಪ್ರ ಕನ್ನಡ ರೀತಿಯ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿದಾಗ ಭಾಷೆ ಉಳಿಯುವುದಕ್ಕೆ ಸಾಧ್ಯ ಎಂದು ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಅವರು ಸಾಸ್ತಾನದ ದಿ.ರಾಮಚಂದ್ರ ತುಂಗರ ಮನೆಯಲ್ಲಿ ಜು. ೨೦ರಂದು ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಜರಗಿದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಕ್ಯಾನಿಗಿಂಡಿ ಹಿಟ್ಟನ್ನು ಅಕ್ಕಿಮುಡಿಯ ಮೇಲೆ ಇಟ್ಟು ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದಲ್ಲಿ ಸಾಂಪ್ರಾದಾಯಿಕವಾಗಿ ಆಸಾಡಿ ಹಬ್ಬವನ್ನು ಆಚರಿಸುವ ಮೂಲಕ ಈ ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಕುಂದಾಪ್ರ ಕನ್ನಡ ಭಾಷೆಯನ್ನು ಬಳಸಿ ಬಳಸಿ ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿ ನಮ್ಮದು. ಭಾಷೆಯಲ್ಲಿನ ಸ್ಥಿತ್ಯಂತರಗಳ ಅಧ್ಯಯನಕ್ಕೆ ಭಾಷೆಯನ್ನು ಲಿಖಿತವಾಗಿ ದಾಖಲಿಸಬೇಕು ಎಂದರು.
ಕುಂದಾಪ್ರ ಕನ್ನಡದ ರಾಯಭಾರಿ ಖ್ಯಾತಿಯ ಮನು ಹಂದಾಡಿ ಆಸಾಡಿ ಹಬ್ಬದ ಆಚರಣೆ ಮತ್ತು ನೆಲಮೂಲ ಸಂಸ್ಕೃತಿಯ ಆರಾಧಾನೆಯಲ್ಲಿ ಅದರ ಪ್ರಾಮುಖ್ಯತೆ ಕುರಿತು ತಿಳಿಸಿದರು.
ಈ ಸಂದರ್ಭ ಕಸಾಪ ವತಿಯಿಂದ ನೀಲಾವರ ಸುರೇಂದ್ರ ಅಡಿಗ ಹಾಗೂ ಮನುಹಂದಾಡಿಯವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೀಪಕ್ ಶೆಟ್ಟಿ ಬಾರ್ಕೂರು, ಉದಯ್ ಶೆಟ್ಟಿ ಪಡುಕೆರೆ, ಹರೀಶ್ ಕಿರಣ್ ತುಂಗ, ಪ್ರವೀಣ್ ಯಕ್ಷೀಮಠ, ಸಫಲ್ ಶೆಟ್ಟಿ, ಸುನೀಲ್ ಪಾಂಡೇಶ್ವರ್ ಮತ್ತು ಅಶ್ವಿತ್ ಶೆಟ್ಟಿ ಕೊಡ್ಲಾಡಿ ಉಪಸ್ಥಿತರಿದ್ದರು. ಜನಸೇವಾ ಟ್ರಸ್ಟ್ನ ವಸಂತ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು.