ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ವಿಶ್ವ ಕುಂದಾಪುರ ಕನ್ನಡ ಹಬ್ಬ ಸಂಭ್ರಮದಿಂದ ನಡೆಯಿತು. ಟೀಮ್ ಕುಂದಾಪುರಿಯನ್ಸ್ ವತಿಯಿಂದ ಮಾತಿನ್ ಹಬ್ಬ ಕಾರ್ಯಕ್ರಮ ಆಯೋಜಿಸಲಾಯಿತು.
ಬದುಕು ಕಟ್ಟಕೊಳ್ಳುವ ಸಲುವಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಯಾದ ಕುಂದಾಪುರ ಭಾಗದವರೇ ಸೇರಿ ಕಟ್ಟಿದ ತಂಡವೇ ಟೀಂ ಕುಂದಾಪುರಿಯನ್ಸ್. ಈಗಾಗಲೇ ಹತ್ತು-ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಹಾನಗರಿಯಲ್ಲಿ ಮನೆಮಾತಾದ ತಂಡ, ಇಂದು ಕುಂದಾಪುರದ ಹಬ್ಬದ ಮೂಲಕ ಮತ್ತೊಮ್ಮೆ ತನ್ನ ಸಾಧನೆಯನ್ನ ತೋರಿಸಿಕೊಟ್ಟಿದೆ.
ಕಾರ್ಯಕ್ರಮದಲ್ಲಿ ಕುಂದಾಪುರ ಕನ್ನಡ ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ದೀಪಕ್ ಶೆಟ್ಟಿ, ನಟ ಕವೀಶ್ ಶೆಟ್ಟಿ, ಶೇಫ್ ಟಾಕ್ ಚೇರ್ ಮ್ಯಾನ್ ಗೋವಿಂದ್ ಪೂಜಾರಿ, ಅಜಿತ್ ಶೆಟ್ಟಿ ಉಳ್ತೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಕುಂದಾಪುರ-ಬೆಂಗಳೂರು ಭಾಗದಲ್ಲಿ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಾಯ್ತು. ಕಾರ್ಯಕ್ರಮದಲ್ಲಿ ಕುಂದಾಪುರ ಕ್ವಿಜ್, ಕಠಿಣ ಪದಗಳ ಅರ್ಥ ಹೇಳುವ ಸ್ಪರ್ಧೆ ಸೇರಿದಂತೆ ಹಲವು ಆಟೋಟ ಸ್ಪರ್ಧೆಗಳು ಬಂದವರ ಗಮನ ಸೆಳೆಯಿತು. ಕುಂದಾಪುರ ಶೈಲಿಯ ಗಂಜಿ-ಉಪ್ಪಿನೋಡಿ ಬಂದವರ ಹೊಟ್ಟೆ ತಣಿಸಿತು. ಇದೇ ತಿಂಗಳ 23ಕ್ಕೆ ಬೆಂಗಳೂರಿನ ಬಂಟರ ಸಂಘದಲ್ಲಿ ನಡೆಯಲಿರುವ ಅದ್ಧೂರಿ ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸರ್ವರನ್ನೂ ಆಮಂತ್ರಿಸಿ, ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.