ಪ್ರಯಾಗದ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ಮೋದಿ

ಪ್ರಯಾಗರಾಜ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಂಭಮೇಳದಲ್ಲಿ ಭಾಗವಹಿಸಿ ಗಂಗಾನದಿಗೆ ಗಂಗಾರತಿ ಮಾಡಿದ ಪ್ರಧಾನಿ ಮೋದಿ, ಪೌರ ಕಾರ್ಮಿಕರ ಪಾದತೊಳೆದದ್ದು ವಿಶೇಷವಾಗಿತ್ತು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ಆಗಮಿಸಿದ ಮೋದಿ, ಗಂಗಾ ನದಿಯಲ್ಲಿ ಪುಣ್ಯಸ್ನಾನವನ್ನೂ ಮಾಡಿದರು. ಇದಾದ ನಂತರ ಸಂಗಂ ಘಾಟ್ ನಲ್ಲಿ ಗಂಗಾನದಿಗೆ ಪೂಜೆ ಸಲ್ಲಿಸಿದರು.

ಇದಾದ ನಂತರ ಓರ್ವ ಮಹಿಳೆಯೂ ಸೇರಿದಂತೆ ಪೌರ ಕಾರ್ಮಿಕರ ಪಾದವನ್ನು ಪ್ರಧಾನಿ ತೊಳೆದರು. ತನ್ನ ಪಾದವನ್ನು ತೊಳೆದ ಬಗ್ಗೆ ಮಹಿಳೆ ಪ್ರತಿಕ್ರಿಯಿಸಿ, ಇದು ಕನಸೋ ನನಸೋ ಎಂದು ಗೊತ್ತಾಗುತ್ತಿಲ್ಲ. ಮೋದಿ ಇನ್ನೊಂದು ಅವಧಿಗೂ ಪ್ರಧಾನಿಯಾಗಬೇಕೆಂದು ಆಶಿಸಿದರು.

  ಕುಂಭಮೇಳದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಈ ಮಹಾನ್ ಮೇಳವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ನನ್ನ ಹೃದಯದ ನಮಸ್ಕಾರಗಳು ಎಂದರು.ಇಷ್ಟೊಂದು ಸ್ವಚ್ಚ ಗಂಗೆಯನ್ನು ನಾನು ನೋಡುತ್ತಿರುವುದು ಇದೇ ಮೊದಲು, ಇದೆಲ್ಲಾ ಸಾಧ್ಯವಾಗಿದ್ದು ಪೌರಕಾರ್ಮಿಕರಿಂದ. ನಿಮ್ಮ ಈ ಒಳ್ಳೆ  ಕೆಲಸವನ್ನು ದೇಶದೆಲ್ಲಡೆ ಜನತೆಗೆ ವಿವರಿಸುತ್ತೇನೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.