ಮಂಗಳೂರು: ಸ್ತ್ರೀ ಸಬಲೀಕರಣ, ಬಡಮಕ್ಕಳ ಶಿಕ್ಷಣ ಹಾಗೂ ಸರಕಾರಿ ಶಾಲೆಗಳ ಅಭಿವೃದ್ದಿಯ ಧ್ಯೇಯವನ್ನಿಟ್ಟುಕೊಂಡು ಕುಳಾಯಿ ಫೌಂಡೇಶನ್ ಅನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸುಮಾರು 250 ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ವೆಚ್ಚ ನಿಭಾಯಿಸುವ ಜೊತೆಗೆ ಅವರನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದತ್ತು ಪಡೆಯುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಫೌಂಡೇಶನಿನ ಸಂಸ್ಥಾಪಕಿ ಪ್ರತಿಭಾ ಕುಳಾಯಿ ಹೇಳಿದರು.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆಯುತ್ತಿರುವ ಫೌಂಡೇಶನ್ನಿನ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಮತ್ತು ಅವರ ಮುಂದಿನ ಉದ್ಯೋಗ ಭದ್ರತೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
2019 ರಲ್ಲಿ ಸ್ಥಾಪನೆಯಾಗಿರುವ ಕುಳಾಯಿ ಫೌಂಡೇಶನ್ ಈಗಾಗಲೇ 131 ಬಡಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದೆ. ಕಳೆದೆರಡು ವರ್ಷಗಳ ಕೊರೋನಾ ಹಾವಳಿ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರಿನ ಹಂಪನಕಟ್ಟೆಯಲ್ಲಿ ಪ್ರತಿನಿತ್ಯ 250 ಮಂದಿ ಕೂಲಿ ಕಾರ್ಮಿಕರು ಹಾಗೂ ನಿರ್ಗರ್ತಿಕರಿಗೆ ಊಟ ನೀಡಿದ್ದಲ್ಲದೆ, ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.
ಮುಂದಿನ ದಿನಗಳಲ್ಲಿ ಕುಳಾಯಿ ಫೌಂಡೇಶನ್ ವತಿಯಿಂದ ಸರಕಾರಿ ಶಾಲೆಗಳ ದತ್ತು ಸ್ವೀಕಾರ ಯೋಜನೆ ರೂಪಿಸಲಿದ್ದು, ಆಂಗ್ಲ ಮಾಧ್ಯಮ ಕಲಿಕೆಗೆ ಒತ್ತು ನೀಡುವ ಕಾರ್ಯಕ್ರಮ ರೂಪಿಸಲಾಗುವುದು. ಇದರ ಜೊತೆಗೆ ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಕಾಲೇಜುಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಶುಲ್ಕ ಕಟ್ಟಲು ಕಷ್ಟ ಪಡುತ್ತಿರುವ ವಿದ್ಯಾರ್ಥಿಗಳಿದ್ದಲ್ಲಿ ತಕ್ಷಣವೇ ಅವರ ಶುಲ್ಕ ತುಂಬಲು ಆರ್ಥಿಕ ಸಹಾಯ ಒದಗಿಸಲಾಗುವುದು. ಪದವಿ ಪೂರ್ವ, ಪದವಿ ವಿದ್ಯಾಭ್ಯಾಸ, ಡಿಪ್ಲೋಮಾ, ಐಟಿಐ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.
ವಿಳಾಸ: ಪ್ರತಿಭಾ ಕುಳಾಯಿ, ಕುಳಾಯಿ ಫೌಂಡೇಶನ್, ವಿ ಟಿ ರೋಡ್, ಕುಳಾಯಿ ಮಂಗಳೂರು 575019. ದೂ. ಸಂಖ್ಯೆ: 996475410